ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು 
ದೇಶ

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: 'ರಾಪಿಡೋ ರೈಡರ್' ಸೋಗಿನಲ್ಲಿದ್ದ ಬಿಷ್ಣೋಯ್ ಗ್ಯಾಂಗ್ ಸ್ಲೀಪರ್ ಸೆಲ್ ಅರೆಸ್ಟ್! Bishnoi Gang

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ 'ರಾಪಿಡೋ ರೈಡರ್' ಸೋಗಿನಲ್ಲಿ ಮಾಹಿತಿ ಕಲೆಹಾಕುತ್ತಿದ್ದ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಬಾಲಿವುಡ್​ ನಟ, ಆಕ್ಷನ್​ ಹೀರೋ ಟೈಗರ್​ ಶ್ರಾಫ್​ ಮೇಲೆ ನಡೆದ ಗುಂಡಿನ ದಾಳಿ ಘಟನೆಗೆ ಇಡೀ ಚಿತ್ರರಂಗ ಬೆಚ್ಚಿಬಿದ್ದಿರುವುದು ನಿಜವಾಗಿದೆ. ಜುಹುವಿನಲ್ಲಿರುವ ಫುಟ್​ಬಾಲ್​ ಕ್ಲಬ್​​ನಲ್ಲಿ ಆಟ ಮುಗಿಸಿಕೊಂಡು ಕಾರನ್ನೇರಿ ಹೊರಟಿದ್ದ ನಟನೆ ಮೇಲೆ ಇಬ್ಬರು ಆಗಂತುಕರು ಒಮ್ಮೆಲೇ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಟ ಟೈಗರ್​ಗೆ ಹೆಚ್ಚೇನು ತೊಂದರೆಯಾಗದಿದ್ದರೂ, ಕಾರಿನ ಡ್ರೈವರ್​ ಮತ್ತು ಪಕ್ಕದಲ್ಲಿದ್ದ ಇನ್ನೊರ್ವ ವ್ಯಕ್ತಿ ತೀವ್ರ ಗಾಯಗೊಂಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು, ಕೆಲವೇ ದಿನಗಳಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ಮುಂದುವರಿದಿದೆ. ಪ್ರಸ್ತುತ ನಡೆಯುತ್ತಿರುವ ಪೊಲೀಸ್​ ವಿಚಾರಣೆಯಲ್ಲಿ, ಪ್ರಮುಖ ಆರೋಪಿ, ರಿತಿಕ್​ ಕುಲಕರ್ಣಿ ಅಲಿಯಾಸ್​ ರೋಶನ್​ ಬಗ್ಗೆ ಕೆಲ ಶಾಕಿಂಗ್​ ಮಾಹಿತಿಗಳು ಬಯಲಾಗಿದೆ.

'ರಾಪಿಡೋ' ಸೋಗಿನಲ್ಲಿ ಕೊಲೆಗೆ ಸ್ಕೇಚ್​!

ಮುಂಬೈ ಪೊಲೀಸರ ವಶದಲ್ಲಿರುವ ಆರೋಪಿ, ರಿತಿಕ್​ ಕುಲಕರ್ಣಿ ಅಲಿಯಾಸ್​ ರೋಶನ್​ ಮೂಲತಃ ಬಿಹಾರದ ಬೇಗುಸರಾಯ್ ನಿವಾಸಿಯಾಗಿದ್ದಾನೆ. ಇವನು ಜುಹು, ಗೊರೆಗಾಂ ವ್ಯಾಪ್ತಿಯಲ್ಲಿ ರಾಪಿಡೋ ಬೈಕ್​ ಚಾಲಕನ ಕೆಲಸ ಮಾಡುತ್ತಿದ್ದಾಗಿ ತಿಳಿದುಬಂದಿದೆ.

ಆದರೆ, ಇವನು ಈ ರಾಪಿಡೋ ಬೈಕ್​ಅನ್ನು ಸೆಲೆಬ್ರಿಟಿಗಳ ಮನೆಗಳ ಹತ್ತಿರಕ್ಕೆ ಹೋಗಿ ಅಲ್ಲಿಯ ಫೋಟೊ ಹಾಗೂ ವಿಡಿಯೋಗಳನ್ನು ಕ್ಲಿಕ್​ಕಿಸಿಕೊಂಡು, ಬಿಷ್ಣೋಯ್​ ಗ್ಯಾಂಗ್​ಗೆ ರವಾನಿಸುತ್ತಿದ್ದಾಗಿ ಹೇಳಲಾಗುತ್ತಿದೆ. ಒಂದರ್ಥದಲ್ಲಿ ಈ ರಿತಿಕ್​ ಕುಲಕರ್ಣಿ ಬಿಷ್ಣೋಯ್​ ಗ್ಯಾಂಗ್​ನ ಸ್ಲೀಪರ್​ ಸೆಲ್​ ಆಗಿದ್ದ ಎಂದೂ ಹೇಳಬಹುದಾಗಿದೆ.

ನಂತರ, ಟೈಗರ್​ ಶ್ರಾಫ್​ ಮೇಲೆ ದಾಳಿ ಮಾಡುವುದು ನಿಶ್ಚಯವಾದ ಬಳಿಕ ಇವನು ಅಂಧೇರಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ, ಈ ಸಮಯದಲ್ಲಿ ಇವನು ಮುಂಬೈ ವಿಳಾಸವಿರುವ ನಕಲಿ ಆಧಾರ್​ ಕಾರ್ಡ್​ವೊಂದನ್ನು ಪಡೆದುಕೊಂಡಿದ್ದ ಎಂಬ ಶಾಕಿಂಗ್​ ಸಂಗತಿ ಬಯಲಾಗಿದೆ. ಇವನು ಮಾಡುತ್ತಿದ್ದ ಕೆಲಸಕ್ಕಾಗಿ ಬಿಷ್ಣೋಯ್​ ಗ್ಯಾಂಗ್​ ಇವನಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದು, ಅವರು ಕೊಡುತ್ತಿದ್ದ ಹಣದಲ್ಲಿ ತನ್ನ ನಿತ್ಯದ ಖರ್ಚನ್ನು ನಿರ್ವಹಿಸುತ್ತಿದ್ದಾಗಿ ರಿತಿಕ್​ ಕುಲಕರ್ಣಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಮುಂದುವರಿದ ತನಿಖೆ!

ಇನ್ನು ಈ ರಿತಿಕ್​ ಕುಲಕರ್ಣಿ ಜತೆಗೆ ಹರಿಯಾಣದ ರಿಹಾನ್​ ಅಲಿಯಾಸ್​ ಸುಕ್ಕಾ ಮತ್ತು ಪೂಲ್​ ಸಿಂಗ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ, ಹರಿಯಾಣದ ಸೋನಿಪತ್‌ನ ಕುನಾಲ್ (21), ಸುಮಿತ್​ (19), ರಾಧಾ (23) ಮತ್ತು ಬಬಿತಾ (23) ಎನ್ನುವವರನ್ನು ಅರೆಸ್ಟ್​ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್​ ನ್ಯಾಯಲಯ ಅಕ್ಟೋಬರ್ 31 ರ ವರೆಗೆ ಇವರನ್ನು ಪೊಲೀಸ್​ ಕಸ್ಟಡಿಗೆ ನೀಡಿದ್ದು, ಅಲ್ಲಿವರೆಗೆ ಪೊಲೀಸರು ಅವರ ಭಾಷೆಯಲ್ಲಿ ತನಿಖೆ ನಡೆಸಿ, ಸತ್ಯಾಸತ್ಯೆಯನ್ನು ಬಯಲಿಗೆಳೆಯಲಿದ್ದಾರೆ, (ಏಜೆನ್ಸೀಸ್​).