

ಅಸ್ಸಾಂ: ಸಾಮಾನ್ಯವಾಗಿ ಎತ್ತುಗಳು ಗದ್ದೆಯಲ್ಲಿ ನೇಗಿಲನ್ನು ತಮ್ಮ ಹೆಗಲಿಗೇರಿಸಿಕೊಂಡು ಉಳುಮೆ ಮಾಡುತ್ತವೆ. ಆದರೆ, ಅಸ್ಸಾಂನ ಹಳ್ಳಿಯೊಂದರಲ್ಲಿ, ರೈತ ಆನೆಯೊಂದಕ್ಕೆ ನೇಗಿಲನ್ನು ಕಟ್ಟಿ ತನ್ನ ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ಕೆ ಮುಂದಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಘಟನೆಯು ಅಸ್ಸಾಂ ರಾಜ್ಯದ ನುಮಾಲಿಗಢ ಎಂಬಲ್ಲಿ ನಡೆದಿದ್ದು, ನೇಗಿಲನ್ನು ಸಿಕ್ಕಿಸಿಕೊಂಡು ಊಳುಮೆ ಮಾಡುತ್ತಿರುವ ಈ ಆನೆಯನ್ನು 'ಮಾಣಿಕ್' ಎಂದು ಗುರುತಿಸಲಾಗಿದೆ.
ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿರುವ ರೈತನನ್ನು ನುಮಾಲಿಗಢ ನಿವಾಸಿ, ಅತುಲ್ ಕರ್ಮಾಕರ್ ಎಂದು ಗುರುತಿಸಲಾಗಿದ್ದು, ಇವನು ತನ್ನ ಸಾಸಿವೆ ಬಿತ್ತನೆಗಾಗಿ ಬಳಸುವ ಭೂಮಿಯನ್ನು ಆನೆ ಮೂಲಕ ಊಳುಮೆ ಮಾಡಿದ್ದಾನೆ.
ವಿಡಿಯೋನಲ್ಲಿ ಆನೆಯ ಮಾವುತ ಪಕ್ಕದಲ್ಲಿ ನಿಂತಿದ್ದು, ಆನೆ 'ಮಾಣಿಕ್' ಬೆನ್ನಿಗೆ ಕಬ್ಬಿಣದ ಸರಪಳಿ ಮೂಲಕ ನೇಗಿಲನ್ನು ಕಟ್ಟಲಾಗಿದ್ದು, ರೈತ ಅತುಲ್, ಮಾಣಿಕ್ನನ್ನು ಎತ್ತುಗಳನ್ನು ಮುನ್ನಡೆಸುವಂತೆ ಆನೆಯನ್ನು ಮುನ್ನೆಡಿಸಿ, ಉಳುಮೆ ಕಾರ್ಯ ಮಾಡಿದ್ದಾನೆ. ಆನೆ ಕೂಡ ಯಾವುದೇ ರೀತಿಯ ಅಕ್ರೋಶ, ಅಸಹಕಾರ ತೋರದೆ ಬಿತ್ತನೆ ಕಾರ್ಯವನ್ನು ಮಾಡಿದೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರ ತಾಳ್ಮೆ ಕಟ್ಟೆಯೊಡೆದು, ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟು ದಿನ ಎತ್ತು, ಎಮ್ಮೆ, ಕೋಣಗಳ ಮೇಲೆ ಅತ್ಯಾಚಾರ ಮಾಡಲಾಯಿತು. ಈಗ ಆನೆಯನ್ನು ಈ ಕೆಲಸಕ್ಕೆ ಬಳಸಲಾಗುತ್ತಿದೆ ಎಂದು ಒಬ್ಬ ಬಳಕೆದಾರರು ಕಿಡಿಕಾರಿದ್ದಾರೆ.
ಗದ್ದೆ ಉಳುಮೆಗೆ ಟ್ರ್ಯಾಕ್ಟರ್ ಸೇರಿದಂತೆ ಅತ್ಯಾಧುನಿಕ ಯಂತ್ರಗಳನ್ನು ಕಂಡುಹಿಡಿಯಲಾಗಿದೆ. ಆದರೂ, ಈ ಕೆಲಸಕ್ಕೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಮೂಕಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಆನೆ ಮೂಲತಃ ಕಾಡು ಪ್ರಾಣಿ. ಇವುಗಳನ್ನು ಬಳಸಿಕೊಂಡು ಗದ್ದೆ ಕೆಲಸ ಮಾಡುವುದು ತೀರಾ ಅಪಾಯಕಾರಿಯಾಗಿದೆ. ಇವರಿಗೆ ಮದ ಬಂದರೆ ಆ ರೈತನ ಪ್ರಾಣಕೂಡ ಹೋಗಬಹುದು. ಹೀಗಗಿ ಇಂತಹ ಹುಚ್ಚುತನದ ಕೆಲಸಕ್ಕೆ ಕೈಹಾಕಬೇಡಿ ಎಂದು ಮತ್ತೊಬ್ಬರು ಬುದ್ಧಿ ಹೇಳಿದ್ದಾರೆ, (ಏಜೆನ್ಸೀಸ್).