Aga Ruhullah Mehdi | ಶ್ರೀನಗರ ಲೋಕಸಭಾ ಸಂಸದ ಅಘಾ ಸೈಯದ್ ರುಹುಲ್ಲಾ ಮೆಹದಿ
ಶ್ರೀನಗರ: ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಇಲ್ಲಿನ ಲೋಕಸಭಾ ಸಂಸದ ಅಘಾ ಸೈಯದ್ ರುಹುಲ್ಲಾ ಮೆಹದಿ (Aga Ruhullah Mehdi) ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ನಡೆಸಿದ ವೇಳೆ ಶಿಯಾ ಮುಸ್ಲಿಮರ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಯಿತು. ಈ ಘಟನೆಯ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ಸಂಸದ ಮೆಹದಿ ತೀವ್ರವಾಗಿ ಟೀಕಿಸಿದ್ದರು.
ಇದಾದ ಬಳಿಕ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮಹಿಳಾ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳನ್ನು ಸಂಸದರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರು ವೈರಲ್ ಆಗಿರುವ ವಿಡಿಯೋಗಳು ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತವೆ ಮತ್ತು ಜನರನ್ನು ದಾರಿತಪ್ಪಿಸುತ್ತವೆ ಎಂಬ ಕಾರಣ ನೀಡಿ ಸಂಸದರನ್ನು ಬಂಧಿಸಿದ್ದಾರೆ.
ಪೊಲೀಸರು ಹೇಳಿದ್ದೇನು..?
ಭಯ ಮೂಡಿಸುವ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಮತ್ತು ದಾರಿತಪ್ಪಿಸುವ ವಿಷಯಗಳ ಪ್ರಸರಣದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಶ್ರೀನಗರ ಸಂಸದ ಮತ್ತು ನಗರದ ಮಾಜಿ ಮೇಯರ್ ಜುನೈದ್ ಅಜೀಮ್ ಮಾಟೂ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪು ಮಾಹಿತಿಯನ್ನು ಹರಡುವ ಇಂತಹ ಉದ್ದೇಶಪೂರ್ವಕ ಪ್ರಯತ್ನಗಳು ಶಾಂತಿ, ಭದ್ರತೆ ಮತ್ತು ಒಟ್ಟಾರೆ ಸ್ಥಿರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಫೇಸ್‌ಬುಕ್ ಖಾತೆ ಬಂದ್
ತಮ್ಮ ಫೇಸ್‌ಬುಕ್ ಖಾತೆಯನ್ನು ಅಮಾನತುಗೊಳಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿರುವ ಸಂಸದರು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಆಡಳಿತದಲ್ಲಿರುವ ಕೆಲವು ಮೂರ್ಖರು ನನ್ನ ಭದ್ರತಾ ವಿವರಗಳನ್ನು ಹಿಂಪಡೆಯುವ ಮೂಲಕ, ನನ್ನ ಫೇಸ್‌ಬುಕ್ ಖಾತೆಯನ್ನು ಅಮಾನತುಗೊಳಿಸುವುದರಿಂದ ನಾನು ಅವರ ದೌರ್ಜನ್ಯಗಳನ್ನು ಹೇಳುವುದನ್ನು ನಿಲ್ಲಿಸಬಹುದು ಎಂದು ಭಾವಿಸುತ್ತಾರೆ. ಇದು ಹಾಸ್ಯಾಸ್ಪದ ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಂಸದರ ಕಚೇರಿ ಹೇಳಿದ್ದೇನು..?
ಪೊಲೀಸರ ಈ ಕ್ರಮಕ್ಕೆ ಸಂಸದರ ಕಚೇರಿಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದು, ಒಬ್ಬ ಸಾರ್ವಭೌಮ ರಾಷ್ಟ್ರದ ನಾಯಕನನ್ನು ಹುತಾತ್ಮರನ್ನಾಗಿಸಿದ್ದನ್ನು ಖಂಡಿಸಲು ಧೈರ್ಯವಿಲ್ಲದ ಈ ಸರ್ಕಾವು, ಘಟನೆಯನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲು ಅಪಾರ ಧೈರ್ಯವನ್ನು ಪ್ರದರ್ಶಿಸಿದೆ ಎಂದು ವ್ಯಂಗ್ಯವಾಡಿದೆ.
ಸದ್ಯ ಈ ಪ್ರಕರಣವು ಕಾಶ್ಮೀರದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಆಡಳಿತಾತ್ಮಕ ಕ್ರಮಗಳ ನಡುವಿನ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ(ಏಜೆನ್ಸೀಸ್).