180 ಮಂದಿಯ ಪ್ರಾಣ ಉಳಿಸಿ ಇಂಡಿಯನ್​ ಹೀರೋಗೆ ಗುಜರಾತ್‌ನ ಅತ್ಯುನ್ನತ ಪ್ರಶಸ್ತಿ ಘೋಷಣೆ | Smit Machchhar 
ದೇಶ

ರಕ್ತ ಹರಿಯುತ್ತಿದ್ರೂ 180 ಜನರ ಜೀವ ಉಳಿಸಿದ ಇಂಡಿಯನ್​ ಹೀರೋಗೆ ಗುಜರಾತ್‌ನ ಅತ್ಯುನ್ನತ ಪ್ರಶಸ್ತಿ ಘೋಷಣೆ | Smit Machchhar

ಈ ದಾಳಿಯನ್ನು ವಿಫಲಗೊಳಿಸುವಲ್ಲಿ ಮತ್ತು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡುವಲ್ಲಿ ಸ್ಮಿತ್ ಪ್ರಮುಖ ಪಾತ್ರ ವಹಿಸಿದ್ದೇ ಈ ಗೌರವಕ್ಕೆ ಮುಖ್ಯ ಕಾರಣವಾಗಿದೆ.

  • ಗುಜರಾತ್ ಸರ್ಕಾರದಿಂದ 'ಫ್ಲೈದುಬೈ' ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಗೌರವ

  • 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ'ಯನ್ನು ಘೋಷಿಸಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್

Smit Machchhar: 'ಫ್ಲೈದುಬೈ'ನ FZ1073 ವಿಮಾನ ಘಟನೆಯಲ್ಲಿ ಕೋ-ಪೈಲಟ್​ನ ಪಿತೂರಿಯ ಭೀಕರ ದಾಳಿಗೆ ಎದೆಗುಂದದೆ, 180 ಮಂದಿಯ ಜೀವ ಉಳಿಸುವ ಮೂಲಕ ಸಾಹಸ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಇದೀಗ ಇಡೀ ಜಗತ್ತೇ ಕೊಂಡಾಡುತ್ತಿದೆ. ಕ್ಯಾಪ್ಟನ್​ ಸ್ಮಿತ್​ರ ಸಾಹಸಗಾಥೆಯನ್ನು ಮೆಚ್ಚಿ ಗುಜರಾತ್​ ಸರ್ಕಾರವು ಇದೀಗ ತನ್ನ ಅತ್ಯುನ್ನತ ಹಾಗೂ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದೆ.

ರಕ್ತ ಹರಿಯುತ್ತಿದ್ರೂ ಬಿಟ್ಟುಕೊಟ್ಟಿಲ್ಲ

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ, ಸಹ-ಪೈಲಟ್ ಒಬ್ಬರು ಪೈಲಟ್ ಸ್ಮಿತ್ ಅವರ ಮೇಲೆ ಹಲ್ಲೆ ನಡೆಸಿ ವಿಮಾನವನ್ನು ಹೈಜಾಕ್​ ಮಾಡಲು ಯತ್ನಿಸಿದರು. ಈ ದಾಳಿಯನ್ನು ವಿಫಲಗೊಳಿಸುವಲ್ಲಿ ಮತ್ತು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡುವಲ್ಲಿ ಸ್ಮಿತ್ ಪ್ರಮುಖ ಪಾತ್ರ ವಹಿಸಿದ್ದೇ ಈ ಗೌರವಕ್ಕೆ ಮುಖ್ಯ ಕಾರಣವಾಗಿದೆ.

ಮೂಲತಃ ಗುಜರಾತ್​ನವರೇ ಆದ ಸ್ಮಿತ್ ಮಚ್ಚಾರ್ ಅವರಿಗೆ ರಾಜ್ಯ ಸರ್ಕಾರವು ಅತ್ಯುನ್ನತ ಗೌರವವನ್ನು ನಿಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಅವರಿಗೆ 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ'ಯನ್ನು ನೀಡಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಪ್ಟನ್‌ಗೆ 25 ಲಕ್ಷ ರೂ.ಗಳ ನಗದು ಬಹುಮಾನವನ್ನೂ ಘೋಷಿಸಲಾಗಿದೆ. 180 ಜನರ ಜೀವ ಉಳಿಸಿದ್ದಕ್ಕಾಗಿ ಮುಖ್ಯಮಂತ್ರಿಗಳು ಪೈಲಟ್​ರನ್ನು ಶ್ಲಾಘಿಸಿದ್ದಾರೆ.

ಕೋ-ಪೈಲಟ್​ನ ದಾಳಿಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಪ್ರಯಾಣಿಕರ ಜೀವವನ್ನು ಉಳಿಸಲು ಕಿಂಚಿತ್ತು ಸೀಟಿನಿಂದ ಅಲುಗಾಡದೆ, ಅವರು ತೋರಿದ ಧೈರ್ಯ ಸ್ಫೂರ್ತಿದಾಯಕ. ಮತ್ತು ಸ್ಮಿತ್​ ನಮ್ಮ ಗುಜರಾತ್ ಹಾಗೂ ದೇಶದ ಹೆಮ್ಮೆಯ ಸಂಕೇತ ಎಂದು ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಸ್ಮಿತ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗಿದೆ. ದೇವಾಲಯದ ಟ್ರಸ್ಟ್‌ನ ಆಶ್ರಯದಲ್ಲಿ 'ಮಹಾಮೃತ್ಯುಂಜಯ ಮಂತ್ರ' ಪಠಣವನ್ನು ನಡೆಸಲಾಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಪ್ರಸ್ತುತ, ಪ್ರಾಣಪಾಯದಿಂದ ಪಾರಾಗಿರುವ ಪೈಲಟ್ ಸ್ಮಿತ್​ರನ್ನು​ ಈಗ ಹೆಚ್ಚಿನ ಚಿಕಿತ್ಸೆಗೆಂದು ಸೌದಿ ಅರೇಬಿಯಾದಿಂದ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).