ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ 
ದೇಶ

ಪಕ್ಷಾಂತರದಂತಹ ಸಾಂವಿಧಾನಿಕ ಪಾಪದ ಆರೋಪ ಹೊತ್ತವರಿಗೆ ಶಿವಸೇನೆಯ ಚಿಹ್ನೆ ನೀಡಬಹುದೇ?; ಸುಪ್ರೀಂಕೋರ್ಟ್ | Supreme Court

ಡಿಸಿಎಂ ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪರಿಶೀಲಿಸುವಾಗ, ಮಂಗಳವಾರ(ಅ. 06) ಪಕ್ಷಾಂತರದಂತಹ "ಸಾಂವಿಧಾನಿಕ ಪಾಪ" ಎಸಗಿದ ಆರೋಪ ಹೊತ್ತಿರುವ ಸದಸ್ಯರಿಗೆ ಶಿವಸೇನೆಯ ಮೀಸಲು ಬಿಲ್ಲು-ಬಾಣ ಚಿಹ್ನೆಯನ್ನು ನೀಡಬಹುದೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ನವದೆಹಲಿ: ಡಿಸಿಎಂ ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪರಿಶೀಲಿಸುವಾಗ, ಮಂಗಳವಾರ(ಅ. 06) ಪಕ್ಷಾಂತರದಂತಹ "ಸಾಂವಿಧಾನಿಕ ಪಾಪ" ಎಸಗಿದ ಆರೋಪ ಹೊತ್ತಿರುವ ಸದಸ್ಯರಿಗೆ ಶಿವಸೇನೆಯ ಮೀಸಲು ಬಿಲ್ಲು-ಬಾಣ ಚಿಹ್ನೆಯನ್ನು ನೀಡಬಹುದೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಶಿಂಧೆ ಬಣವನ್ನು ಅಧಿಕೃತ ಶಿವಸೇನೆ ಎಂದು ಗುರುತಿಸಿ ಅದಕ್ಕೆ ಬಿಲ್ಲು-ಬಾಣ ಚಿಹ್ನೆಯನ್ನು ನೀಡುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿ ಮತ್ತು 2022 ರಲ್ಲಿ ಶಿವಸೇನೆಯಲ್ಲಿನ ವಿಭಜನೆಯಿಂದ ಉದ್ಭವಿಸಿದ ಹಲವಾರು ಅರ್ಜಿಗಳನ್ನು ಒಟ್ಟುಗೂಡಿಸಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಮಂಗಳವಾರ ಶಿಂಧೆ ಬಣದ ಪರವಾಗಿ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರ ವಾದಗಳನ್ನು ಆಲಿಸುವಾಗ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾ. ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು, ಚಿಹ್ನೆ ಹಂಚಿಕೆ ಮಾಡಿದ್ದರ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ.

ನ್ಯಾಯಮೂರ್ತಿ ಬಾಗ್ಚಿ ಅವರು, ಚಿಹ್ನೆಗೆ ಸಂಬಂಧಿಸಿದ ಭಾವನೆ ಪಕ್ಷಾಂತರದ ಆರೋಪಿಗಳ ಪರವಾಗಿ ಕಾರ್ಯನಿರ್ವಹಿಸಬೇಕೇ? ಅಥವಾ ಸಾಂವಿಧಾನಿಕ ಉಲ್ಲಂಘನೆಯ ವಿರುದ್ಧ ದೂರು ನೀಡಿದವರ ಪರವಾಗಿ ಕಾರ್ಯನಿರ್ವಹಿಸಬೇಕೇ? ಸಾಂವಿಧಾನಿಕ ಪಾಪ ಮಾಡಿದ ವ್ಯಕ್ತಿಗಳಿಗೆ ಈ ಭಾವನೆ ಅನ್ವಯಿಸುತ್ತದೆಯೇ ಅಥವಾ ಸಾಂವಿಧಾನಿಕ ಪಾಪದ ಬಗ್ಗೆ ದೂರು ನೀಡಿದ ವ್ಯಕ್ತಿಗಳಿಗೆ ಅನ್ವಯಿಸುತ್ತದೆಯೇ? ಎಂದು ಕೇಳಿದರು.

ಚುನಾವಣಾ ಚಿಹ್ನೆಗಳ(ಮೀಸಲಾತಿ ಮತ್ತು ಹಂಚಿಕೆ) ಆದೇಶದ ಅಡಿಯಲ್ಲಿ ಯಾವ ಬಣವು ರಾಜಕೀಯ ಪಕ್ಷವೆಂದು ಪರಿಗಣಿಸಲ್ಪಡುತ್ತದೆ ಎಂಬುದನ್ನು ನಿರ್ಧರಿಸಲು 'ಶಾಸಕಾಂಗ ಬಹುಮತದ ಮಾನದಂಡ'ವನ್ನು ಬಳಸುವ ಚುನಾವಣಾ ಆಯೋಗದ ಕ್ರಮವನ್ನು ನೀರಜ್ ಕಿಶನ್ ಕೌಲ್ ಅವರು ಸಮರ್ಥಿಸಿಕೊಂಡರು.

ಸುಭಾಷ್ ದೇಸಾಯಿ ಪ್ರಕರಣದಲ್ಲಿನ ಸಂವಿಧಾನಿಕ ಪೀಠದ ತೀರ್ಪು ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಅವರು, ಶಾಸಕಾಂಗ ಬಲಾಬಲ ಪರೀಕ್ಷೆಯ ಮಾನದಂಡವನ್ನು ಬಳಸುವುದನ್ನು ಆ ತೀರ್ಪುಗಳು ನಿಷೇಧಿಸಿಲ್ಲ ಎಂದು ವಾದಿಸಿದರು.

ಬಳಿಕ ಬಹುಮತಕ್ಕೆ ಆಧಾರವಾಗಿರುವ ಶಾಸಕರ ವಿರುದ್ಧ ಅನರ್ಹತೆಯ ಪ್ರಕ್ರಿಯೆಗಳು ಬಾಕಿಯಿರುವಾಗ, ಶಾಸಕಾಂಗ ಬಲವನ್ನು ಸುರಕ್ಷಿತ ಮಾನದಂಡ ಎಂದು ಪರಿಗಣಿಸಬಹುದೇ ಎಂದೂ ಪೀಠವು ಪ್ರಶ್ನಿಸಿತು.

ತನ್ನನ್ನು ನಿಜವಾದ ರಾಜಕೀಯ ಪಕ್ಷವೆಂದು ಸಾಬೀತುಪಡಿಸಿಕೊಳ್ಳುವ ಬಣಕ್ಕೆ ಆ ಚಿಹ್ನೆ ಸಿಗಬೇಕು ಎಂದು ಕೌಲ್ ಪ್ರತಿಪಾದಿಸಿದರು. ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಶೀಲಿಸಿದ ನಂತರ ಸಾಂವಿಧಾನಿಕ ಪ್ರಾಧಿಕಾರವು ಸೂಕ್ತವೆಂದು ಕಂಡುಕೊಂಡರೆ, ಶಾಸಕಾಂಗ ಬಹುಮತವನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಹೇಳಿದರು. ವಾದ-ಪ್ರತಿವಾದ ಮುಂದುವರೆದಿದ್ದು, ನಾಳೆಯೂ ವಿಚಾರಣೆ ನಡೆಯಲಿದೆ (ಏಜೆನ್ಸೀಸ್).