

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 'ಮತಗಳ್ಳತನ'ದ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದು, ಯಾರೊಬ್ಬರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ(ಅ. 06) ಇಂಡಿಯಾ ಮೈತ್ರಿಕೂಟವು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಚುನಾವಣಾ ಆಯೋಗದ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸುತ್ತಿದ್ದಾಗ ಆಕಾಶವಾಣಿ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ, ಮತಗಳ್ಳತನ ಅನ್ನೋದು ದೇಶದ್ರೋಹದ ಕೆಲಸ. ಅದನ್ನು ಮಾಡಿದ ಎಲ್ಲರೂ ಹೊಣೆಯನ್ನು ಹೊರಬೇಕಾಗುತ್ತದೆ. ಯಾರೊಬ್ಬರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಂದುವರೆದು, ಬಿಜೆಪಿಯನ್ನು ಕೇವಲ ಎದುರಿಸುವುದಷ್ಟೇ ಅಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಹೋರಾಡುತ್ತಿದ್ದೇವೆ ಎಂದ ಅವರು, ಪ್ರಧಾನಿ ಮೋದಿ, ಶಾ ಮತ್ತು ಭಾಗವತ್ ಅವರು 'ಮತ ಕಳ್ಳತನ'ದ ಮೂಲಕ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತು ಜ್ಞಾನೇಶ್ ಕುಮಾರ್ ಅವರಿಗೆ ನೆರವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಅವರನ್ನು ಕೇವಲ ಎದುರಿಸುತ್ತಿಲ್ಲ, ಅವರನ್ನು ನಾಶಮಾಡುತ್ತೇವೆ. ಬಿಜೆಪಿ ಏನು ಹೇಳುತ್ತದೆ ಎಂಬುದರಲ್ಲಿ ನನಗೆ ಆಸಕ್ತಿ ಇಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ನಾನು ಇಲ್ಲಿ ನಿಂತಿದ್ದೇನೆ. ನನ್ನ ಜೊತೆಗೆ, ಪ್ರಜಾಪ್ರಭುತ್ವವನ್ನು ಉಳಿಸಲು ಬಯಸುವ 300 ಸಂಸದರು ಇಲ್ಲಿಗೆ ಬಂದಿದ್ದರು. ಆದ್ರೆ ಜ್ಞಾನೇಶ್ ಕುಮಾರ್ ನಮ್ಮನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾರೆ. ಅವರು ಭಯಪಡುತ್ತಿದ್ದಾರೆ. ಅಮಿತ್ ಶಾ, ನರೇಂದ್ರ ಮೋದಿ, ಮೋಹನ್ ಭಾಗವತ್ ಮತ್ತು ಜ್ಞಾನೇಶ್ ಕುಮಾರ್ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಬೀದಿಯಿಂದ ಚುನಾವಣಾ ಆಯೋಗದ ಕಚೇರಿಗೆ ನಡೆದ ಮೆರವಣಿಗೆಯನ್ನು ಆಕಾಶಭವನದ ಮುಂದೆ ದೆಹಲಿ ಪೊಲೀಸರು ತಡೆ ಹಿಡಿದರು. ಪ್ರತಿಭಟನೆಯ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ಸಂಸದರಾದ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಓ'ಬ್ರಿಯನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆಯಲಾಯಿತು (ಏಜೆನ್ಸೀಸ್).