Smriti Irani > ವಂದೇ ಮಾತರಂ ಅಪಮಾನಿಸಿದ ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಕಿಡಿ 
ದೇಶ

ಸಂಸತ್ತಿನ ಶಾಸನವನ್ನು ಕಸದ ಬುಟ್ಟಿಗೆ ಎಸೆಯಲು ಸೋನಿಯಾ ಯಾರು..? ವಂದೇ ಮಾತರಂ ಅಪಮಾನಿಸಿದ ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಕಿಡಿ | Smriti Irani

ನವದೆಹಲಿ: ವಂದೇ ಮಾತರಂ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಹಾಗೂ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ. 1950ರಲ್ಲೇ ಸಂವಿಧಾನ ಸಭೆಯಲ್ಲಿ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನ ಗೀತೆಗೆ ನೀಡುವಷ್ಟೇ ಗೌರವವನ್ನು ವಂದೇ ಮಾತರಂಗೂ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಈ ರಾಷ್ಟ್ರಗೀತೆಯ ಗೌರವದ ಕುರಿತು ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಯಾರು..? ಎಂದು ಇರಾನಿ ಪ್ರಶ್ನಿಸಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ಭಾರತದ ಸಂಸತ್ತು ಒಂದು ವಿಷಯದ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿ ಕಾನೂನು ರೂಪಿಸಿದ ನಂತರ, ಆ ಶಾಸನವನ್ನು ಕಾಲದ ಕಸದ ಬುಟ್ಟಿಗೆ ಎಸೆಯುವ ಹಕ್ಕು ಈ ದೇಶದಲ್ಲಿ ಸೋನಿಯಾ ಗಾಂಧಿ ಅವರಿಗೆ ಇದೆಯೇ? ಎಂದು ಪ್ರಶ್ನಿಸಿದರು.

ಸೋನಿಯಾಗೆ ಭಾರತ ಮಾತೆಯ ಬಗ್ಗೆ ತೊಂದರೇನಾ..?

ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ನುಡಿಸುತ್ತಿದ್ದಾಗ, ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡುತ್ತಿದ್ದುದನ್ನು ಸ್ಮೃತಿ ಇರಾನಿ ಪ್ರಸ್ತಾಪಿಸಿದರು. ಗೀತೆಯ 5 ಮತ್ತು 6ನೇ ಚರಣಗಳಲ್ಲಿ ಉಲ್ಲೇಖಿಸಲಾಗಿರುವ ದುರ್ಗಾ ದೇವಿ ಅಥವಾ ಲಕ್ಷ್ಮಿ ದೇವಿಯ ಬಗ್ಗೆ ಸೋನಿಯಾ ಅವರಿಗೆ ಅಭ್ಯಂತರವಿದೆಯೇ ಎಂದು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿಯವರಿಗೆ ತೊಂದರೆ ಇರುವುದು ಯಾವುದರ ಬಗ್ಗೆ..? ಭಾರತ ಮಾತೆಯ ಬಗ್ಗೆಯೋ ಅಥವಾ ದುರ್ಗಾ ದೇವಿಯ ಬಗ್ಗೆಯೋ? ಎಂದು ಖಾರವಾಗಿ ಕೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಚೇರಿಯ ಘಟನೆಯ ಬೆನ್ನಲ್ಲೇ, 1937ರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯದಂತೆ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದರು. ಈ ಮೂಲಕ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಲೆಗಳಲ್ಲಿ ಜನ ಗಣ ಮನಕ್ಕೂ ಮುನ್ನ ವಂದೇ ಮಾತರಂ ಗೀತೆಯ ಎಲ್ಲಾ 6 ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಇತ್ತೀಚೆಗೆ ಗೃಹ ಸಚಿವಾಲಯ ಹೊರಡಿಸಿದ್ದ ಆದೇಶಕ್ಕೆ ಕಾಂಗ್ರೆಸ್ ವಿರುದ್ಧವಾಗಿ ನಡೆದುಕೊಂಡಿದೆ.

ಲಕ್ಷ್ಮಿ ಹಾಗೂ ಸರಸ್ವತಿ ದೇವಿಯರ ಉಲ್ಲೇಖದ ಬಗ್ಗೆ ಇರಾನಿ ಮಾತು!

ವಂದೇ ಮಾತರಂ ಗೀತೆಯ ಚರಣಗಳು ಭಾರತ ಮಾತೆಯನ್ನು ಜ್ಞಾನ, ಶಕ್ತಿ ಮತ್ತು ಪೋಷಣೆಯ ಸೆಲೆಯಾಗಿ ಹಾಗೂ ರಾಷ್ಟ್ರ ಧರ್ಮದ ಸಂಕೇತವಾಗಿ ಚಿತ್ರಿಸುತ್ತವೆ ಮತ್ತು ಹತ್ತು ಕೈಗಳನ್ನು ಹೊಂದಿರುವ ಭಗವತಿಯನ್ನು ಸ್ಮರಿಸುತ್ತವೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಗೀತೆಯಲ್ಲಿರುವ ದುರ್ಗಾ, ಲಕ್ಷ್ಮಿ ಹಾಗೂ ಸರಸ್ವತಿ ದೇವಿಯರ ಉಲ್ಲೇಖಗಳು ಇತರ ಧರ್ಮಗಳಿಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ ಭಾವಿಸುತ್ತಿದೆಯೇ ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.
1937ರ CWC ನಿರ್ಣಯಕ್ಕೆ ಕಾಂಗ್ರೆಸ್ ಅಂಟಿಕೊಂಡಿರುವ ಬಗ್ಗೆ ಮಾತನಾಡಿದ ಅವರು, ವಂದೇ ಮಾತರಂ ಗೀತೆಯನ್ನು ವಿರೋಧಿಸಿ ಮಹಮ್ಮದ್ ಅಲಿ ಜಿನ್ನಾ ಹಾದಿ ಹಿಡಿದವರು ಅಂತಿಮವಾಗಿ ದೇಶ ತೊರೆದು ಪಾಕಿಸ್ತಾನವನ್ನು ನಿರ್ಮಿಸಿಕೊಂಡರು. ಆದರೆ ಭಾರತದಲ್ಲೇ ಉಳಿದುಕೊಂಡವರು ವಂದೇ ಮಾತರಂ ಅನ್ನು ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆಯಾಗಿ ಸ್ವೀಕರಿಸಿದರು, ಇದು ಕೇವಲ ಕಾಂಗ್ರೆಸ್ ಸದಸ್ಯರಿಗಷ್ಟೇ ಸೀಮಿತವಾಗಿರಲಿಲ್ಲ ಎಂದು ಇರಾನಿ ಸ್ಪಷ್ಟಪಡಿಸಿದರು.

ಗೋಹತ್ಯೆಯನ್ನು ಬೆಂಬಲಿಸುತ್ತೀರಾ..?

ಗಾಂಧಿ ಕುಟುಂಬವೂ ಸದಾ ಕಾಂಗ್ರೆಸ್‌ನ ಭಾಗವಾಗಿರಲಿಲ್ಲ ಎಂಬುದನ್ನು ನೆನಪಿಸಿದ ಸ್ಮೃತಿ ಇರಾನಿ, ವಂದೇ ಮಾತರಂ ಅನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ನಿರ್ಧರಿಸುವ ಹಕ್ಕು ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಇದೇ ವೇಳೆ ಜವಾಹರ್‌ಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ನಿರ್ಧಾರಗಳನ್ನು ಉಲ್ಲೇಖಿಸಿದ ಅವರು, 1938ರಲ್ಲಿ ಜಿನ್ನಾ ಅವರ 14 ಅಂಶಗಳ ಬೇಡಿಕೆಯಲ್ಲಿದ್ದ ಗೋ ಹತ್ಯೆ ವಿಷಯಕ್ಕೆ ನೆಹರೂ ನೀಡಿರುವ ಪ್ರತಿಕ್ರಿಯೆಯ ದಾಖಲೆಗಳನ್ನು ಪ್ರಸ್ತಾಪಿಸಿದರು. ಸೋನಿಯಾ ಗಾಂಧಿ ಅವರು ಭಾರತದಲ್ಲಿ ಗೋ ಹತ್ಯೆಯನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸುತ್ತಾರೆಯೇ..? ಎಂದು ಇರಾನಿ ನೇರವಾಗಿ ಪ್ರಶ್ನಿಸಿದರು.
ಅಲ್ಲದೆ, 1923ರ ಕಾಕಿನಾಡ ಅಧಿವೇಶನದಲ್ಲಿ ಜಿನ್ನಾ ವಂದೇ ಮಾತರಂ ಹಾಡಬಾರದು ಎಂದು ಕರೆ ನೀಡಿದ್ದಾಗ, ಮರಾಠಿ ಗಾಯಕಿಯೊಬ್ಬರು ಜಿನ್ನಾ ವಿರುದ್ಧ ನಿಂತು ಇದು ರಾಷ್ಟ್ರೀಯ ವೇದಿಕೆ, ಇಲ್ಲಿ ವಂದೇ ಮಾತರಂ ಹಾಡೇ ಸಿದ್ಧ ಎಂದು ಧೈರ್ಯ ತೋರಿದ್ದರು ಎಂಬುದನ್ನು ಸ್ಮರಿಸಿದರು. ಆ ಮರಾಠಿ ಗಾಯಕಿ ತೋರಿದ ಧೈರ್ಯವನ್ನು ನೆಹರೂ ತೋರಿಸಲಿಲ್ಲವೇ ಎಂದು ಇರಾನಿ ಪ್ರಶ್ನಿಸಿದರು.
ಒಂದು ವೇಳೆ ಕಾಂಗ್ರೆಸ್ 1937ರ ನಿರ್ಣಯದಂತೆಯೇ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಿದರೆ ಸರ್ಕಾರ ಏನು ಮಾಡುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಇದು ರಾಷ್ಟ್ರೀಯ ಭಾವನೆಗಳಿಗೆ ಹಾಗೂ ಹಿಂದೂಗಳ ಭಾವನೆಗಳಿಗೆ ಎಸಗುವ ಸಂಪೂರ್ಣ ಅಪಮಾನ ಎಂದರು. ಜತೆಗೆ, ಕಾಂಗ್ರೆಸ್ ಪಕ್ಷವು ಹಿಂದೂ ಧರ್ಮವನ್ನು ಬಿಟ್ಟು ಬೇರಾವುದಾದರೂ ಧರ್ಮವನ್ನು ಅಪಮಾನಿಸಿದ ಉದಾಹರಣೆ ಇದೆಯೇ..? ಎಂದು ಆಕ್ರೋಶ ವ್ಯಕ್ತಪಡಿಸಿದರು(ಏಜೆನ್ಸೀಸ್​).