Puducherry Elections |  
ದೇಶ

ಅಮಿತ್ ಷಾ ಒಂದು ಫೋನ್ ಕಾಲ್, ಮೈತ್ರಿ ಸೇಫ್...ಮುನಿಸಿಕೊಂಡಿದ್ದ ಸಿಎಂ ರಂಗಸಾಮಿ ಮನವೊಲಿಸಿದ ಟ್ರಬಲ್​ ಶೂಟರ್​ | Puducherry Elections

Puducherry Elections: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಒಳಗಿನ ಬಿರುಕು ಸದ್ಯಕ್ಕೆ ಶಮನಗೊಂಡಂತೆ ಕಂಡುಬಂದಿದ್ದು, ಸೀಟು ಹಂಚಿಕೆ ಮತ್ತು ರಾಜ್ಯದ ಸ್ಥಾನಮಾನದ ವಿಚಾರವಾಗಿ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ಎನ್. ರಂಗಸಾಮಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಮನವೊಲಿಸಿದ್ದಾರೆ ಎಂದು ವರದಿಯಾಗಿದೆ.
ತಮ್ಮ ನಿಲುವನ್ನು ಅಂಟಿಕೊಂಡು ತಿರುಚೆಂಡೂರು ಯಾತ್ರೆಗೆ ತೆರಳಿದ್ದ ಸಿಎಂ ರಂಗಸಾಮಿ ಅವರಿಗೆ ಅಮಿತ್ ಷಾ ಕರೆ ಮಾಡಿ ಮಾತನಾಡಿದ್ದು, ಮೈತ್ರಿಕೂಟದಲ್ಲಿ ಮುಂದುವರಿಯಲು ಈ ಸಂಭಾಷಣೆ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಸದ್ಯಕ್ಕೆ ಮೈತ್ರಿ ಮುಂದುವರಿದಿದ್ದರೂ ಸಹ ರಂಗಸಾಮಿ ಅವರು ಮುಂದಿಟ್ಟಿರುವ ಕೆಲವು ಪ್ರಮುಖ ಬೇಡಿಕೆಗಳು ಇನ್ನೂ ಸಂಪೂರ್ಣವಾಗಿ ಇತ್ಯರ್ಥಗೊಂಡಿಲ್ಲ. ಪುದುಚೇರಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಔಪಚಾರಿಕ ಭರವಸೆ ಮತ್ತು ಸ್ಯಾಂಟಿಯಾಗೊ ಮಾರ್ಟಿನ್ ಪುತ್ರ ಚಾರ್ಲ್ಸ್ ನೇತೃತ್ವದ ಲಚ್ಚಿಯಾ ಜನನಾಯಕ ಕಚ್ಚಿ (ಎಲ್‌ಜೆಕೆ) ಪಕ್ಷವನ್ನು ಮೈತ್ರಿಕೂಟದಿಂದ ಹೊರಗಿಡಬೇಕು ಎಂಬ ಷರತ್ತುಗಳನ್ನು ಬಿಜೆಪಿ ಇದುವರೆಗೆ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಚುನಾಯಿತ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಕಳವಳಗಳನ್ನು ಬಗೆಹರಿಸಲಾಗುವುದು ಮತ್ತು ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪವಿಲ್ಲದೆ ಆಡಳಿತವನ್ನು ಸುಗಮವಾಗಿ ನಡೆಸುವ ವಾತಾವರಣ ಕಲ್ಪಿಸಲಾಗುವುದು ಎಂದು ಷಾ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಕಳೆದ ಐದು ವರ್ಷಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಚುನಾಯಿತ ಸರ್ಕಾರದ ನಡುವಿನ ನಿರಂತರ ಘರ್ಷಣೆಗಳಿಂದಾಗಿ ಆಡಳಿತಕ್ಕೆ ಅಡ್ಡಿಯಾಗಿತ್ತು ಎಂಬುದು ಎನ್ಆರ್ ಕಾಂಗ್ರೆಸ್‌ನ ಪ್ರಮುಖ ಆರೋಪವಾಗಿದ್ದು, ಗುತ್ತಿಗೆ ಶಿಕ್ಷಕರ ನೇಮಕಾತಿಯಂತಹ ಸಣ್ಣ ನಿರ್ಧಾರಗಳಿಗೂ ಅಡೆತಡೆ ಉಂಟಾಗುತ್ತಿರುವುದು ಸಿಎಂ ರಂಗಸಾಮಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಅವರು ಕೇಂದ್ರದಿಂದ ಕೇವಲ ಬಾಯಿಮಾತಿನ ಭರವಸೆಯ ಬದಲಾಗಿ ಲಿಖಿತ ಒಪ್ಪಂದಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಗೊಂದಲದ ವಿಷಯವಾಗಿ ಪುದುಚೇರಿ ಬಿಜೆಪಿ ಅಧ್ಯಕ್ಷ ವಿ.ಪಿ. ರಾಮಲಿಂಗಂ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸ್ಥಾನಮಾನ ನೀಡುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ, ಬದಲಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ವಿಶೇಷ ಯೋಜನೆಗಳನ್ನು ರೂಪಿಸುವುದಾಗಿ ಹೇಳಿದ್ದಾರೆ.
ಸೀಟು ಹಂಚಿಕೆಯ ಸೂತ್ರದ ಪ್ರಕಾರ, ಪುದುಚೇರಿ ವಿಧಾನಸಭೆಯ ಒಟ್ಟು 30 ಸ್ಥಾನಗಳ ಪೈಕಿ ಎನ್ಆರ್ ಕಾಂಗ್ರೆಸ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ 14 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಈ 14 ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ತನ್ನ ಮಿತ್ರಪಕ್ಷವಾದ ಎಐಎಡಿಎಂಕೆಗೆ ಬಿಟ್ಟುಕೊಡುವ ಸಾಧ್ಯತೆಯಿದೆ.
2021 ರ ಚುನಾವಣೆಯಲ್ಲಿ ಎನ್ಆರ್ ಕಾಂಗ್ರೆಸ್ 10 ಮತ್ತು ಬಿಜೆಪಿ 6 ಸ್ಥಾನಗಳನ್ನು ಗೆದ್ದು ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಈ ಬಾರಿ ಮೈತ್ರಿ ಬಲದೊಂದಿಗೆ ಮತ್ತೆ ಅಧಿಕಾರ ಹಿಡಿಯಲು ಎನ್‌ಡಿಎ ಮುಂದಾಗಿದ್ದರೆ, ಕಳೆದ ಬಾರಿ ಆರು ಸ್ಥಾನ ಗೆದ್ದಿದ್ದ ಡಿಎಂಕೆ ಮತ್ತು ಎರಡಕ್ಕೆ ಕುಸಿದಿದ್ದ ಕಾಂಗ್ರೆಸ್ ಈ ಬಾರಿ ಮೈತ್ರಿಕೂಟಕ್ಕೆ ಪ್ರಬಲ ಪೈಪೋಟಿ ನೀಡಲು ತಯಾರಿ ನಡೆಸಿವೆ(ಏಜೆನ್ಸೀಸ್​).