ಕೋಟಾದಲ್ಲಿ ಫ್ಯಾನ್‌ಗಳಿಗೆ ಕಬ್ಬಿಣದ ಗ್ರಿಲ್ ಅಳವಡಿಕೆ
ಕೋಟಾ: ಭಾರತದ ಕೋಚಿಂಗ್ ರಾಜಧಾನಿ ಎಂದೇ ಕರೆಸಿಕೊಳ್ಳುವ ರಾಜಸ್ಥಾನದ ಕೋಟಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಅದು ವಿದ್ಯಾರ್ಥಿಗಳ ರ್ಯಾಂಕ್ ವಿಚಾರಕ್ಕಲ್ಲ, ಬದಲಾಗಿ ಹಾಸ್ಟೆಲ್ ಕೊಠಡಿಗಳಲ್ಲಿ ಅಳವಡಿಸಲಾಗಿರುವ ವಿಚಿತ್ರ ಕಬ್ಬಿಣದ ಗ್ರಿಲ್ ಫ್ಯಾನ್‌ಗಳಿಗಾಗಿ (Kota Viral Fan)! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಪುಟ್ಟ ವಿಡಿಯೋ ಈಗ ದೇಶಾದ್ಯಂತ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ವಿಡಿಯೋದಲ್ಲೇನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ವಿದ್ಯಾರ್ಥಿಗಳ ಹಾಸ್ಟೆಲ್ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ಗಳನ್ನು ಬೃಹತ್ ಕಬ್ಬಿಣದ ಗ್ರಿಲ್‌ಗಳಿಂದ (ಜಾಲರಿ) ಸುತ್ತುವರಿಯಲಾಗಿದೆ. ಅಂದರೆ, ಯಾರೂ ಕೂಡ ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಸಾಧ್ಯವಾಗದಂತೆ ಈ ವಿನ್ಯಾಸ ಮಾಡಲಾಗಿದೆ. ಇದನ್ನು ಕಂಡ ನೆಟ್ಟಿಗರು ವಿದ್ಯಾರ್ಥಿಗಳ ಮಾನಸಿಕ ಒತ್ತಡ ಎಷ್ಟಿರಬಹುದು? ಎಂದು ಕಿಡಿಕಾರಿದ್ದಾರೆ.
ಯಾಕಿಂತ 'ಜೈಲು' ಮಾದರಿಯ ವ್ಯವಸ್ಥೆ?
IIT-JEE ಮತ್ತು NEET ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಕೋಟಾಗೆ ಬರುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಬೆಚ್ಚಿಬೀಳಿಸುವಂತೆ ಹೆಚ್ಚಾಗಿವೆ. ಆತ್ಮಹತ್ಯೆಗಳನ್ನು ತಡೆಯಲು ಅಧಿಕಾರಿಗಳು ಈ ಹಿಂದೆ ಸೀಲಿಂಗ್ ಫ್ಯಾನ್‌ಗಳಿಗೆ ಸ್ಪ್ರಿಂಗ್ ಅಳವಡಿಸುವ ಕ್ರಮ ಕೈಗೊಂಡಿದ್ದರು.
ಈಗ ಅದರ ಮುಂದಿನ ಹಂತವಾಗಿ ಫ್ಯಾನ್‌ಗಳಿಗೇ ಕಬ್ಬಿಣದ ಪಂಜರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಗ್ರಿಲ್‌ಗಳನ್ನು ಎಲ್ಲೆಡೆ ಕಡ್ಡಾಯಗೊಳಿಸಲಾಗಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಾಸ್ಟೆಲ್ ಮಾಲೀಕರು ಭಯದಿಂದ ಈ ಕೆಲಸಕ್ಕೆ ಕೈಹಾಕಿದ್ದಾರೆ.
ನೆಟ್ಟಿಗರ ಆಕ್ರೋಶ ಮತ್ತು ವ್ಯಂಗ್ಯ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಇಷ್ಟೆಲ್ಲಾ ಮಾಡುವ ಬದಲು ಶಿಕ್ಷಣ ವ್ಯವಸ್ಥೆಯನ್ನೇ ಸುಧಾರಿಸಬಹುದು ಅಲ್ವಾ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು, ಹಾಗಾದರೆ ಫ್ಯಾನ್ ಕ್ಲೀನ್ ಮಾಡೋದು ಹೇಗೆ? ಎಂದು ತಮಾಷೆಯಾಗಿ ಕೇಳಿದ್ದಾರೆ. ಫ್ಯಾನ್ ಮುಚ್ಚಿದ ಮಾತ್ರಕ್ಕೆ ಆತ್ಮಹತ್ಯೆ ನಿಲ್ಲುತ್ತಾ? ವಿದ್ಯಾರ್ಥಿಗಳ ಮನಸ್ಸನ್ನು ಯಾರು ಸರಿಪಡಿಸುತ್ತಾರೆ? ಎಂದು ಗಂಭೀರವಾಗಿ ಪ್ರಶ್ನಿಸಿದ್ದಾರೆ ಮತ್ತೊಬ್ಬರು.
ಮತ್ತೊಬ್ಬ ಬಳಕೆದಾರರಂತೂ, ಕೋಟಾ ಈಗ ಇಂಜಿನಿಯರ್‌ಗಳ ಬದಲಿಗೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ತಯಾರಿಸುವ ಫ್ಯಾಕ್ಟರಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕೇವಲ ಕಬ್ಬಿಣದ ಗ್ರಿಲ್ ಸಾಕಾ?
ಕೇವಲ ಫ್ಯಾನ್‌ಗಳಿಗೆ ಕಬ್ಬಿಣದ ಜಾಲರಿ ಹಾಕುವುದರಿಂದ ಅಥವಾ ಸ್ಪ್ರಿಂಗ್ ಅಳವಡಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ವಿದ್ಯಾರ್ಥಿಗಳ ಮೇಲೆ ಇರುವ ಪೋಷಕರ ನಿರೀಕ್ಷೆ, ಅತಿಯಾದ ಸ್ಪರ್ಧೆ ಮತ್ತು ಒಂಟಿತನ ಅವರನ್ನು ಕುಗ್ಗಿಸುತ್ತಿದೆ. ಸ್ಥಳೀಯ ಆಡಳಿತವು ಈಗ ಹಾಸ್ಟೆಲ್‌ಗಳಲ್ಲಿ ಕೌನ್ಸೆಲಿಂಗ್ ಅವಧಿಗಳನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮದ ಮೇಲೆ ನಿಗಾ ಇಡಲು ಸೂಚಿಸಿದೆ, (ಏಜನ್ಸೀಸ್).