ಹೈಕಮಾಂಡ್ ಸಭೆ ಮಧ್ಯೆಯೇ ಮಲ್ಲಿಕಾರ್ಜುನ್ ಖರ್ಗೆ ಪುತ್ರನಿಗೆ ತೀವ್ರ ಅನಾರೋಗ್ಯ
- ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ಕಸರತ್ತು!
- ಹೈಕಮಾಂಡ್ ಸಭೆ ಮಧ್ಯೆಯೇ ಮಲ್ಲಿಕಾರ್ಜುನ್ ಖರ್ಗೆ ಪುತ್ರನಿಗೆ ತೀವ್ರ ಅನಾರೋಗ್ಯ
- ಆಸ್ಪತ್ರೆಗೆ ದೌಡಾಯಿಸಿದ ಎಐಸಿಸಿ ಅಧ್ಯಕ್ಷ
- ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
ನವದೆಹಲಿ: ರಾಜ್ಯ ರಾಜಕಾರಣದ ಸಂಪುಟ ಪುನರ್ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯ ಕಾಂಗ್ರೆಸ್ ಹೈ ಕಮಾಂಡ್ ಜೊತೆಗೆ ರಾಜ್ಯ ನಾಯಕರು ಇಂದು (ಜು.16) ಚರ್ಚೆ ನಡೆಸಿದ್ದಾರೆ.
ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆಯುತ್ತಿದ್ದ ಈ ಸಭೆ ಮಧ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಪುತ್ರರೊಬ್ಬರಿಗೆ ತೀವ್ರ ಅನಾರೋಗ್ಯ ಕಂಡುಬಂದ ಹಿನ್ನಲೆ ಖರ್ಗೆ ಸಭೆಯನ್ನು ಮೊಟಕುಗೊಳಿಸಿ ಬೆಂಗಳೂರಿನಲ್ಲಿರುವ ಆಸ್ಪತ್ರೆಗೆ ದೌಡಾಯಿಸಿದ್ದಾರೆಂದು ತಿಳಿದು ಬಂದಿದೆ.
ಹೈ ಕಮಾಂಡ್ ಜೊತೆ ಸಿಎಂ; ಮಾಜಿ ಸಿಎಂ ಚರ್ಚೆ
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿದ ನಂತರ ನೀರಿಕ್ಷೆಯಂತೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮುಖ್ಯ ಮಂತ್ರಿಗಳಾಗಿ ಹೆಚ್ಚು ಕಡಿಮೆ 30 ದಿನಗಳನ್ನು ಪೂರೈಸಿದ ಹಿನ್ನಲೆ ಈಗ ಸಂಪುಟ ವಿಸ್ತರಣೆಯ ಚರ್ಚೆ ಜೋರಾಗಿದೆ.
ಹೀಗಾಗಿ ಯಾವ ಶಾಸಕರಿಗೆ ಸಚವ ಸ್ಥಾನವನ್ನು ನೀಡಬೇಕು ಎಂಬ ಕುರಿತು ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್ ಹೈ ಕಮಾಂಡ್ ಜೊತೆ ಚರ್ಚೆಗೆ ಮುಂದಾಗಿದ್ದಾರೆ.
ಆಯಾ ನಾಯಕರು ತಮ್ಮ ಜೊತೆ ಉತ್ತಮ ಸಂಬಂಧ ಹೊಂದಿರುವ ಶಾಸಕರಿಗೆ ಮಂತ್ರಿ ಪಟ್ಟ ದೊರಕಿಸಲು ಹೈ ಕಮಾಂಡ್ ಮುಂದೆ ಕಸರತ್ತು ನಡೆಸುತ್ತಿದ್ದಾತೆ. ಈ ನಾಯಕರು ಸೂಚಿಸಿರುವ ಶಾಸಕರ ಹೆಸರನ್ನು ರಾಹುಲ್ ಗಾಂಧಿ, ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಕೇಳಿಸಿಕೊಂಡಿದ್ದು ಮುಂದೆ ಏನಾಗಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ. ಸದ್ಯ ಮಲ್ಲಿಕಾರ್ಜುನ್ ಖರ್ಗೆ ಅನುಪಸ್ಥಿತಿ ಕಾರಣ ಸಚಿವ ಸಂಪುಟ ತೀರ್ಮಾನ ಮುಂದೂಡಿಕೆ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿ ಸಪರೇಟ್ ಲಿಸ್ಟ್!
ಇತ್ತ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೂರು ವಿಭಿನ್ನ ಪಟ್ಟಿ ನೀಡಿದ್ದರೆ, ಅತ್ತ ಲೋಕಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ತಮ್ಮದೇ ಆದ ಬೇರೊಂದು ಲಿಸ್ಟ್ ಅನ್ನು ಸಿದ್ಧ ಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಯುವ ಶಾಸಕರಿಗೆ ಹೆಚ್ಚಿನ ಮಹತ್ವ ನೀಡಿದರೆ ಇದು ಮುಂದಿನ ವಿಧಾನಸಭಾ ಚುನಾವಣೆಗೆ ಸಹಕಾರಿ ಆಗಲಿದೆ ಎನ್ನುವುದು ರಾಹುಲ್ ಗಾಂಧಿ ಅವರ ಲೆಕ್ಕಾಚಾರ ಎನ್ನವುದು ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿರುವ ವರ್ತಮಾನವಾಗಿದೆ, (ಏಜನ್ಸೀಸ್).