ದೂರದಿಂದ ಕೇವಲ ಒಂದು ನೀಲಿ ಡ್ರಮ್ ಅಷ್ಟೇ! ತೆಗೆದು ನೋಡಿದವರಿಗೆ ಸಿಕ್ಕಿದ್ದು ಕಂತೆ ಕಂತೆ 500 ರೂ. ನೋಟುಗಳು | Note Bundles 
ದೇಶ

ದೂರದಿಂದ ಕೇವಲ ಒಂದು ನೀಲಿ ಡ್ರಮ್ ಅಷ್ಟೇ! ತೆಗೆದು ನೋಡಿದವರಿಗೆ ಸಿಕ್ಕಿದ್ದು ಕಂತೆ ಕಂತೆ 500 ರೂ. ನೋಟುಗಳು | Note Bundles

Note Bundles: ಭೂಮಿಯ ಅಡಿಯಲ್ಲಿ ಅಡಗಿದ್ದ ಮೂರು ನೀಲಿ ಬಣ್ಣದ ಡ್ರಮ್​ಗಳನ್ನು ಪತ್ತೆಹಚ್ಚಿದ ಅಧಿಕಾರಿಗಳು, ಅದನ್ನು ತೆರೆದು ನೋಡಿದಾಗ ಅದರೊಳಗೆ ಸಿಕ್ಕ ಕಂತೆ ಕಂತೆ 500 ರೂ. ನೋಟುಗಳ ರಾಶಿ ಕಂಡು ಅಕ್ಷರಶಃ ಬೆರಗಾದ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ವರದಿಯಾಗಿದೆ.

ಮನೆಯೊಂದರ ವರಾಂಡದಲ್ಲಿ ನೆಲವನ್ನು ಅಗೆಯುತ್ತಿದ್ದಾಗ, ಭೂಮಿಯ ಅಡಿಯಲ್ಲಿ ಈ ಮೂರು ನೀಲಿ ಬಣ್ಣದ ಡ್ರಮ್‌ಗಳು ಪತ್ತೆಯಾಗಿವೆ. ಏನಿದು ಡ್ರಮ್​ ಎಂದು ಅಚ್ಚರಿಯಿಂದಲೇ ತೆರೆದು ನೋಡಿದ ಖಾಕಿ ಪಡೆಗೆ, ಅದರಲ್ಲಿದ್ದ ಕೋಟ್ಯಂತರ ರೂಪಾಯಿ ಹಣವು ಭಾರಿ ಅಚ್ಚರಿ ಮೂಡಿಸಿದೆ. ನಗದು ಕಂತೆಗಳನ್ನು ಕಂಡು ಸ್ವತಃ ಪೊಲೀಸ್​ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದು, ಹಣವನ್ನು ಎಣಿಸಲು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯು ಪ್ರಯಾಗರಾಜ್​ನ ಗಂಗಾನಗರ ವಲಯದ ನವಾಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರೈಪುರ ರಾಮನಗರ ಗ್ರಾಮದಲ್ಲಿ ನಡೆದಿದೆ. ಸಹೋದರರು ತಮ್ಮ ಪೂರ್ವಜನರ ಮನೆಯೊಂದರ ಹಿತ್ತಲಿನ ಭೂಮಿಯಲ್ಲಿ ಅಪಾರ ಪ್ರಮಾಣದ ನಗದನ್ನು ಬಚ್ಚಿಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕ ಬೆನ್ನಲ್ಲೇ ನವಾಬ್‌ಗಂಜ್ ಮತ್ತು ಸೋರಾನ್ ಖಾಕಿ ಠಾಣೆಗಳ ಅಧಿಕಾರಿಗಳು ಹೈಅಲರ್ಟ್​ ಆದರು. ಅಂತೆಯೇ, ಸ್ಥಳಕ್ಕೆ ಧಾವಿಸಿ ಅಗೆಯುವ ಕೆಲಸ ಶುರು ಮಾಡಿದಾಗಲೇ ಅಸಲಿ ಸಂಗತಿ ಬಟಾಬಯಲಾಗಿದೆ.

ಭೂಮಿಯ ಅಡಿಯಲ್ಲಿ ಹೂತಿಟ್ಟಿದ್ದ ಮೂರು ಡ್ರಮ್‌ಗಳಲ್ಲಿ 500 ರೂಪಾಯಿ ನೋಟುಗಳ ಕಂತೆಗಳು ಇರುವುದನ್ನು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. ನೋಟುಗಳು ಹಾಳಾಗದಂತೆ ನೋಡಿಕೊಳ್ಳಲು, ಡ್ರಮ್‌ಗಳಲ್ಲಿದ್ದ ಹಣವನ್ನು ಪಾಲಿಥೀನ್ ಕವರ್‌ಗಳಲ್ಲಿ ಸುತ್ತಿಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ಯಾದವ್ ಮತ್ತು ರಾಜೇಶ್ ಯಾದವ್ ಎಂಬ ಇಬ್ಬರು ಸಹೋದರರನ್ನು ಪೊಲೀಸರು ಸದ್ಯ ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದ ಹಣವನ್ನು ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಸಿಕ್ಕಿರುವ ಹಣದಲ್ಲಿ ಒಟ್ಟು ಎಷ್ಟಿದೆ ಎಂಬ ನಿಖರವಾದ ಮೊತ್ತವನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ರಿಯಲ್ ಎಸ್ಟೇಟ್ ವ್ಯವಹಾರದ ಹಣ?

ಗ್ರಾಮಸ್ಥರ ಪ್ರಕಾರ, ರಾಜೇಶ್ ಮತ್ತು ರಾಕೇಶ್ ಯಾದವ್ ಈ ಹಿಂದೆ ಪುಣೆಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲವೇ ವರ್ಷಗಳಲ್ಲಿ ಅವರಿಬ್ಬರು ಗ್ರಾಮದಲ್ಲಿ ದಿಢೀರ್​ ಹಲವಾರು ಎಕರೆ ಜಮೀನು, ಮನೆಗಳು ಮತ್ತು ಅಂಗಡಿಗಳನ್ನು ಖರೀದಿಸಿದರು. ಅವರ ಮನೆಯ ಸಮೀಪದಲ್ಲಿ ದೇವಸ್ಥಾನವನ್ನೂ ಕಟ್ಟಲಾಗುತ್ತಿದೆ ಎಂದು ತಿಳಿದುಬಂದಿದೆ. ದೇವಾಲಯ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲಾಗಿತ್ತು ಎಂಬ ಆರೋಪಗಳೂ ಕೇಳಿಬಂದಿವೆ. ಆದರೆ, ಈ ಆರೋಪಗಳು ಇನ್ನೂ ದೃಢಪಟ್ಟಿಲ್ಲ. ಸಹೋದರರ ಆಸ್ತಿಪಾಸ್ತಿಗಳು ಮತ್ತು ಆರ್ಥಿಕ ವಹಿವಾಟುಗಳ ಬಗ್ಗೆ ಸದ್ಯ ಪೊಲೀಸರು ಚುರುಕು ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).