ನವದೆಹಲಿ: ವ್ಯಾಪಾರ-ವಹಿವಾಟನ್ನು ಸುಲಭಗೊಳಿಸಲು, ಅನಗತ್ಯ ತೆರಿಗೆ ಗೊಂದಲಗಳಿಗೆ ತೆರೆ ಎಳೆಯಲು ಹಾಗೂ ತೆರಿಗೆ ಇಲಾಖೆಯ ಕಠಿಣ ನಿಯಮಗಳನ್ನು ಸಡಿಲಿಸಲು ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿ ಹಲವು ಮಹತ್ವದ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದೆ.
ವರದಿಯ ಪ್ರಕಾರ, ಜಿಎಸ್‌ಟಿ ಅಧಿಕಾರಿಗಳ ನೇರ ಬಂಧನದ ಅಧಿಕಾರಕ್ಕೆ ಬ್ರೇಕ್ ಹಾಕುವುದು, ವಿಚಾರಣಾ ಮಿತಿ ಹೆಚ್ಚಳ ಹಾಗೂ ನೌಕರರ ವಿಮೆಯ ಮೇಲಿನ ತೆರಿಗೆ ವಿನಾಯಿತಿ ಸೇರಿದಂತೆ ಹಲವು ವ್ಯಾಪಾರ ಸ್ನೇಹಿ ಸುಧಾರಣೆಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ.
ಇದುವರೆಗೆ ಜಿಎಸ್‌ಟಿ ವಂಚನೆ ಅಥವಾ ತಪ್ಪು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಮೊತ್ತ 5 ಕೋಟಿ ದಾಟಿದರೆ ಅಧಿಕಾರಿಗಳು ವಿಚಾರಣೆ ಆರಂಭಿಸಬಹುದಿತ್ತು. ಆದರೆ ಈಗ ಈ ಮಿತಿಯನ್ನು 10 ಕೋಟಿಗೆ ಹೆಚ್ಚಿಸಲು ಕೌನ್ಸಿಲ್ ಅನುಮೋದನೆ ನೀಡಿದೆ. ಅಂದರೆ, ಸಣ್ಣಪುಟ್ಟ ಲೆಕ್ಕಾಚಾರದ ವ್ಯತ್ಯಾಸಗಳು ಅಥವಾ ಗೊಂದಲಗಳಿದ್ದಾಗ ವ್ಯಾಪಾರಿಗಳು ಕೋರ್ಟ್, ಕಚೇರಿ ಅಲೆಯುವುದು ತಪ್ಪಲಿದೆ.
ಸಾಮಾನ್ಯವಾಗಿ ವ್ಯಾಪಾರಿಗಳನ್ನು ಅತಿ ಹೆಚ್ಚು ಕಾಡುತ್ತಿದ್ದ ವಿಷಯವೆಂದರೆ ಜಿಎಸ್‌ಟಿ ಅಧಿಕಾರಿಗಳಿಗಿದ್ದ ಅರೆಸ್ಟ್ ಮಾಡುವ ಅಧಿಕಾರ. ಕೇಂದ್ರ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ, ತೆರಿಗೆ ವಂಚನೆ ಅಥವಾ ನಕಲಿ ಬಿಲ್ ಅನುಮಾನ ಬಂದ ಕೂಡಲೇ ಆಯುಕ್ತರಿಗೆ ಬಂಧನಕ್ಕೆ ಆದೇಶಿಸುವ ಅಧಿಕಾರವಿತ್ತು. ತೆರಿಗೆ ವಿವರಣೆ ಅಥವಾ ನಿಯಮಗಳ ಅರ್ಥೈಸುವಿಕೆಯಲ್ಲಿ ಸಣ್ಣ ಗೊಂದಲವಾದರೂ ಉದ್ಯಮಿಗಳು ಜೈಲುಪಾಲಾಗುವ ಆತಂಕದಲ್ಲಿರುತ್ತಿದ್ದರು.
ಆದರೆ ನೂತನ ಸುಧಾರಣೆಯ ಪ್ರಕಾರ, ಈ ಬಂಧನದ ಅಧಿಕಾರದ ಬಳಕೆಗೆ ಕಟ್ಟುನಿಟ್ಟಿನ ಮಿತಿ ಹೇರಲಾಗುತ್ತಿದೆ. ನಿಜವಾದ ವಂಚನೆ ಮತ್ತು ಸಾಮಾನ್ಯ ವ್ಯಾಪಾರ ದೋಷಗಳನ್ನು ಪ್ರತ್ಯೇಕಿಸಿ, ಕೇವಲ ತೆರಿಗೆ ವಸೂಲಿ, ಬಡ್ಡಿ ಮತ್ತು ದಂಡದ ಮೂಲಕವೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆದ್ಯತೆ ನೀಡಲಾಗುತ್ತದೆ. ಇದರಿಂದ ಪ್ರಾಮಾಣಿಕ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ಮತ್ತೊಂದು ದೊಡ್ಡ ರಿಲೀಫ್ ಸಿಕ್ಕಿದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುವ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಮತ್ತು ಜೀವ ವಿಮಾ ಪಾಲಿಸಿಗಳ ವೆಚ್ಚದ ಮೇಲೆ ಪಾವತಿಸುವ ಜಿಎಸ್‌ಟಿಗೆ ಇನ್ನು ಮುಂದೆ 'ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್' (ITC) ಸಿಗಲಿದೆ.
ವಿಶೇಷವಾಗಿ ಐಟಿ (IT), ಬ್ಯಾಂಕಿಂಗ್, ಹಣಕಾಸು ಹಾಗೂ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ಸಾವಿರಾರು ನೌಕರರಿರುತ್ತಾರೆ. ಅವರ ವಿಮೆಗೆ ಕಂಪನಿಗಳು ಕೋಟ್ಯಂತರ ರೂಪಾಯಿ ವ್ಯಯಿಸುತ್ತವೆ. ಈಗ ಆ ತೆರಿಗೆ ಮೊತ್ತಕ್ಕೆ ಕ್ರೆಡಿಟ್ ಸಿಗುವುದರಿಂದ ಕಂಪನಿಗಳ ಹೊರೆ ಗಣನೀಯವಾಗಿ ತಗ್ಗಲಿದೆ.
GSTIndia
ಜಿಎಸ್‌ಟಿ ಅಧಿಕಾರಿಗಳು ಸಣ್ಣಪುಟ್ಟ ಮೊತ್ತಕ್ಕೂ ಕಿರುಕುಳ ನೀಡುವುದನ್ನು ತಡೆಯಲು 10,000 ಕ್ಕಿಂತ ಕಡಿಮೆ ಮೊತ್ತದ ವ್ಯತ್ಯಾಸಗಳಿಗೆ ಶೋ-ಕಾಸ್ ನೋಟಿಸ್ ನೀಡದಂತೆ ವಿತ್ತೀಯ ಮಿತಿ ಹೇರಲಾಗುತ್ತಿದೆ. ಜೊಮ್ಯಾಟೋ, ಸ್ವಿಗ್ಗಿ ಮುಂತಾದ ಇ-ಕಾಮರ್ಸ್ ಮೂಲಕ ಸೇವೆ ನೀಡುವ ಅನ್‌ರಿಜಿಸ್ಟರ್ಡ್ ಡೆಲಿವರಿ ಪಾರ್ಟ್‌ನರ್‌ಗಳ ಸೇವೆ ಮೇಲಿನ ಜಿಎಸ್‌ಟಿಯನ್ನು ಶೇ. 5 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.
ಸೆಪ್ಟೆಂಬರ್ 2025 ರಲ್ಲಿ ನಡೆದ ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯ ಬಳಿಕ, ಈ ನಿರ್ಧಾರಗಳು ಭಾರತದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ನಿಯಮಗಳು ಅಧಿಕೃತವಾಗಿ ಜಾರಿಯಾದ ಬಳಿಕ ಮಾರುಕಟ್ಟೆಯಲ್ಲಿ ಹಣದ ಹರಿವು ಮತ್ತು ವ್ಯಾಪಾರ ವಹಿವಾಟು ಮತ್ತಷ್ಟು ಚುರುಕಾಗಲಿದೆ ಎನ್ನಲಾಗುತ್ತಿದೆ, (ಏಜೆನ್ಸೀಸ್).