Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಕಲಾಪ ಪ್ರಾರಂಭವಾಗುವ ಮುನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಸಂಸತ್ತಿನಲ್ಲಿ ತಕ್ಷಣವೇ ಸುದೀರ್ಘ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ತಮ್ಮ ಎಕ್ಸ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಇಂದು ವಿರೋಧ ಪಕ್ಷದ ಸಂಸದರೊಂದಿಗೆ ಮಾನ್ಯ ಲೋಕಸಭಾ ಸ್ಪೀಕರ್ ಅವರನ್ನು ಭೇಟಿಯಾದೆ. ನಿನ್ನೆ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಪರೀಕ್ಷಾ ಬಿಕ್ಕಟ್ಟಿನ ಕುರಿತು ಸರ್ಕಾರದ ಹೊಣೆಗಾರಿಕೆಯಿಲ್ಲದ ನಡವಳಿಕೆಯ ಬಗ್ಗೆ ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಯಬೇಕು ಎಂಬುದು ನಮ್ಮ ಸರಳ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಭವಿಷ್ಯದ ಕುರಿತು ನ್ಯಾಯಯುತ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ ರಾಹುಲ್, ಸಂಸತ್ತಿನಲ್ಲಿ ಭಾರತದ ಯುವಜನತೆಯ ಭವಿಷ್ಯದ ಬಗ್ಗೆ ಚರ್ಚಿಸಲು ಸಾಧ್ಯವಾಗದಿದ್ದರೆ, ಈ ಸಂಸತ್ತು ಇರುವುದು ಯಾವುದಕ್ಕೆ..? ಎಂದು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಯಾವುದೇ ಕಾರಣಕ್ಕೂ ಮುಚ್ಚಿಹಾಕಲು ಬಿಡುವುದಿಲ್ಲ ಎಂದಿರುವ ವಿಪಕ್ಷ ನಾಯಕ, ವಿರೋಧ ಪಕ್ಷಗಳು ವಿದ್ಯಾರ್ಥಿಗಳ ಪರವಾಗಿ ರಸ್ತೆಗಳಲ್ಲೂ ಮತ್ತು ಸಂಸತ್ತಿನ ಒಳಗೂ ಧ್ವನಿ ಎತ್ತಿ ಹೋರಾಟ ಮುಂದುವರಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಆಕ್ರೋಶ, ರಾಜೀನಾಮೆಗೆ ಬೇಡಿಕೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ರಾಹುಲ್ ಗಾಂಧಿ ಅವರ ಮಾತನ್ನು ಬೆಂಬಲಿಸಿದ್ದು, ಸಂಸತ್ತಿನಲ್ಲಿ ಈ ವಿಷಯದ ಕುರಿತು ತಕ್ಷಣ ಚರ್ಚೆಗೆ ಒತ್ತಾಯಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದು ಏಕೆ..? ಸಂಸತ್ತನ್ನು ಸಂಪೂರ್ಣವಾಗಿ ಬಂದ್ ಮಾಡಿ, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು ಯಾಕೆ..? ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಲಕ್ಷಾಂತರ ಯುವಕರ ಸಂಕಷ್ಟಕ್ಕೆ ಯಾರು ಹೊಣೆ ಹೊರುತ್ತಾರೆ..? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಅಲ್ಲದೆ, ಸರ್ಕಾರ ತಕ್ಷಣವೇ ಈ ವಿಷಯದ ಕುರಿತು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ನೀಡಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಘಟನೆಯ ನೈತಿಕ ಮತ್ತು ರಾಜಕೀಯ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
ಘಟನೆಯ ವಿವರ
ಸೋಮವಾರ ವಿದ್ಯಾರ್ಥಿಗಳು ಸಂಸತ್ತಿಗೆ ನಡೆಸಿದ ಸಂಸತ್ ಚಲೋ ಮೆರವಣಿಗೆಯ ವೇಳೆ ದೆಹಲಿಯಲ್ಲಿ ಭಾರಿ ಗೊಂದಲ ಮತ್ತು ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಪ್ರತಿಭಟನಾಕಾರರು ರಸ್ತೆಗಿಳಿದಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದರು. ಸಂಸತ್ತಿನ ಸಮೀಪಕ್ಕೆ ತಲುಪಿದ್ದ ಗುಂಪನ್ನು ಚದುರಿಸುವ ವೇಳೆ ನಡೆದ ಸಂಘರ್ಷದಲ್ಲಿ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಸುಮ್ಮನಿರಲ್ಲ ಎಂದ ನಮೋ
ಮತ್ತೊಂದೆಡೆ, ಎನ್‌ಡಿಎ ಸಂಸದೀಯ ಪಕ್ಷದ ಮಂಗಲ್ ಮಿಲನ್ ಸಭೆಯ ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನೀಟ್ ಪರೀಕ್ಷಾ ಸೋರಿಕೆಗೆ ಕಾರಣರಾದವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ತಿಳಿಸಿದ್ದಾರೆ. ಪರೀಕ್ಷಾ ಪತ್ರಿಕೆ ಸೋರಿಕೆ ತಡೆಯುವುದು ರಾಷ್ಟ್ರೀಯ ಹೊಣೆಗಾರಿಕೆಯಾಗಿದ್ದು, ಭವಿಷ್ಯದಲ್ಲಿ ಅಕ್ರಮಗಳು ನಡೆಯದಂತೆ ಸಂಪೂರ್ಣ ಸುರಕ್ಷಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ ಎಂದು ರಿಜಿಜು ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್).