ಹೈದರಾಬಾದ್: ಮುಂಬರುವ ತೆಲಂಗಾಣ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇರುವ ವೇಳೆಯೇ 2027ರಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿ ತೋರಿಸಲು ರಾಜ್ಯಾದ್ಯಂತ ಪಾದಯಾತ್ತೆ ಕೈಗೊಳ್ಳುವುದಾಗಿ ಬಿಆರ್‌ಎಸ್(BRS) ಕಾರ್ಯಾಧ್ಯಕ್ಷ ಕೆಟಿಆರ್ ಘೋಷಿಸಿದ್ದು, ತಮ್ಮ ಪಕ್ಷದ ಹೆಸರನ್ನು ಬದಲಾಯಿಸಿ ಹಳೆಯ ತೆಲಂಗಾಣ ರಾಷ್ಟ್ರ ಸಮಿತಿ ಮರುಳುವ ಸೂಚನೆ ನೀಡಿದ್ದಾರೆ.
ಮಂಚೇರಿಯಲ್ ಜಿಲ್ಲೆಯ ಕ್ಯಾಥನ್‌ಪಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳೆದ 10 ವರ್ಷಗಳ ಆಡಳಿತದಲ್ಲಿ ಜನರು ಮತ್ತು ಪಕ್ಷದ ನಡುವಿನ ಅಂತರ ಸ್ವಲ್ಪ ಮಟ್ಟಿಗೆ ಹೆಚ್ಚಾಯಿತು. ಅದನ್ನು ಕಡಿಮೆ ಮಾಡುವ ಭಾಗವಾಗಿ ಮುಂದಿನ ವರ್ಷದಿಂದ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಮೇಲೆ ಸಾರ್ವಜನಿಕರ ನಂಬಿಕೆ ಕ್ಷೀಣಿಸುತ್ತಿದ್ದು, ಜೈಲಿಗೆ ಹೋದ ನಂತರವೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಲ್ಪನೆ ಸುಳ್ಳು. 40 ವರ್ಷಗಳ ಹಿಂದೆ ಇಂತಹ ರಾಜಕೀಯ ಸಂಸ್ಕೃತಿ ಇರಲಿಲ್ಲ. ನಾವು ಕಾನೂನುಬಾಹಿರ ಕೆಲಸ ಮಾಡಿ ಜೈಲಿಗೆ ಹೋಗುವಷ್ಟು ನಿರ್ಲಜ್ಜರಲ್ಲ ಎಂದಿದ್ದಾರೆ.
ಮೇ ಅಥವಾ ಜೂನ್ನಲ್ಲಿ ಪಕ್ಷದ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದ್ದು, ಕಾರ್ಯಕರ್ತರಿಗೆ ವಿಶೇಷ ತರಬೇತಿ ತರಗತಿಗಳನ್ನು ನಡೆಸುತ್ತೇವೆ. ಪಕ್ಷದ ನಾಯಕತ್ವವು ತಳಮಟ್ಟದ ಕಾರ್ಯಕರ್ತರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬೇಕು. ಟಿಡಿಪಿ ಸೇರಿದಂತೆ ಇತರ ಪಕ್ಷಗಳಲ್ಲಿ ಅಂತಹ ಉತ್ತಮ ಸಂಪ್ರದಾಯವಿದೆ. ನಾವು ಅದನ್ನು ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಪಕ್ಷದೊಳಗೆ ಅಧಿಕಾರಕ್ಕಾಗಿ ಯಾವುದೇ ಹೋರಾಟವಿಲ್ಲ. ಎಲ್ಲಾ ನಾಯಕರು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷವು ತನ್ನ ಮೂಲ ಹೆಸರು ಟಿಆರ್ಎಸ್ಗೆ ಮರಳು ಬಗ್ಗೆ ಪರಿಗಣಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೇರಿ ಯಾವುದೇ ಪಕ್ಷದ ಜೊತೆ ಮೈತ್ರಿಯಿಲ್ಲ. ಬಿಆರ್‌ಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).