ತೆಲಂಗಾಣ ವಿಧಾನಸಭೆ ಸ್ಪೀಕರ್ ಗಡ್ಡಂ ಪ್ರಸಾದ್
ಹೈದರಾಬಾದ್: ತೆಲಂಗಾಣದಲ್ಲಿ ವಿರೋಧ ಪಕ್ಷ ಬಿಆರ್ಎಸ್ನಿಂದ ಕಾಂಗ್ರೆಸ್ಗೆ ಪಕ್ಷಾಂತರಗೊಂಡ(MLA defection case) 8 ಶಾಸಕರ ಅನರ್ಹತೆ ಅರ್ಜಿಗಳ ಬಗ್ಗೆ ವಿಧಾನಸಭೆ ಸ್ಪೀಕರ್ ಗಡ್ಡಂ ಪ್ರಸಾದ್ ಅಂತಿಮ ತೀರ್ಪು ನೀಡಿದ್ದು, ಇಂದು ಐವರು ಶಾಸಕರು ಪಕ್ಷ ಬದಲಾಯಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ಬುಧವಾರ(ಡಿ. 17) ಬಿಆರ್‌ಎಸ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದಾರೆ.
ಬಿಆರ್ಎಸ್ನಿಂದ ಗೆದ್ದು ಕಾಂಗ್ರೆಸ್ಗೆ ಪಕ್ಷಾಂತರಗೊಂಡಿದ್ದ ಶಾಸಕರಾದ ಅರಿಕೆಪುಡಿ ಗಾಂಧಿ, ಗುಡೆಮ್ ಮಹಿಪಾಲ್ ರೆಡ್ಡಿ, ತೆಲ್ಲಮ್ ವೆಂಕಟ್ ರಾವ್, ಬಂಡ್ಲಾ ಕೃಷ್ಣ ಮೋಹನ್ ರೆಡ್ಡಿ, ಪ್ರಕಾಶ್ ಗೌಡ್, ಕಡಿಯಂ ಶ್ರೀಹರಿ, ದಾನಮ್ ನಾಗೇಂದರ್, ಕೇಲ್ ಯಡಯ್ಯ, ಪೋಚಾರಾಂ ಶ್ರೀನಿವಾಸ್ ರೆಡ್ಡಿ ಮತ್ತು ಎಂ. ಸಂಜಯ್ ಕುಮಾರ್ ಅವರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಬಿಆರ್‌ಎಸ್ ಪಕ್ಷದ ಶಾಸಕರು ವಿಧಾನಸಭಾ ಸ್ಪೀಕರ್‌ಗೆ ದೂರು ಸಲ್ಲಿಸಿದ್ದರು.
ಈ ವಿಷಯದಲ್ಲಿ ಸ್ಪೀಕರ್ ಅವರ ವಿಳಂಬ ಪ್ರಶ್ನಿಸಿ ಬಿಆರ್‌ಎಸ್ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಡಿ. 18 ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸ್ಪೀಕರ್‌ಗೆ ಸೂಚಿಸಿತ್ತು. ಇಲ್ಲದಿದ್ರೆ ನ್ಯಾಯಾಂಗ ನಿಂದನೆ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿತ್ತು.
ಈ ಹಿನ್ನೆಲೆ ಇಂದು ಪಕ್ಷಾಂತರಗೊಂಡ ಶಾಸಕರಾದ ಅರಿಕೆಪುಡಿ ಗಾಂಧಿ, ಗುಡೆಮ್ ಮಹಿಪಾಲ್ ರೆಡ್ಡಿ, ತೆಲ್ಲಂ ವೆಂಕಟ್ ರಾವ್, ಬಂಡ್ಲಾ ಕೃಷ್ಣ ಮೋಹನ್ ರೆಡ್ಡಿ ಮತ್ತು ಪ್ರಕಾಶ್ ಗೌಡ್ ಅವರು ತಮ್ಮ ಪಕ್ಷವನ್ನು ಬದಲಾಯಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅವರನ್ನು ಅನರ್ಹಗೊಳಿಸಲು ಬಲವಾದ ಪುರಾವೆಗಳಿಲ್ಲ ಎಂದು ಬಿಆರ್‌ಎಸ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ಇನ್ನೂ ಮೂವರು ಶಾಸಕರ ಅನರ್ಹತೆಯ ಅರ್ಜಿ ಬಗ್ಗೆ ನಾಳೆ ತೀರ್ಪು ನೀಡಲಿದ್ದಾರೆ.
ಈ ಕುರಿತು ಮಾತನಾಡಿರುವ ತೆಲಂಗಾಣ ವಿಧಾನಸಭೆ ಸ್ಪೀಕರ್ ಗಡ್ಡಂ ಪ್ರಸಾದ್, ಪಕ್ಷ ಬದಲಾಗಿದೆ ಎಂಬುದಕ್ಕೆ ಯಾವುದೇ ಸರಿಯಾದ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿಲ್ಲ. ಶಾಸಕರನ್ನು ಅನರ್ಹಗೊಳಿಸಲು ಯಾವುದೇ ಬಲವಾದ ಪುರಾವೆಗಳಿಲ್ಲ. ಹಾಗಾಗಿ ಐವರ ಅನರ್ಹತೆಯ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).