ಮುಸ್ಲಿಂ ಯುವಕರು ಗರ್ಬಾ ಕಾರ್ಯಕ್ರಮಕ್ಕೆ ನಿಮ್ಮ ಸಹೋದರಿಯರನ್ನು ಕರೆತನ್ನಿ ಎಂದ ಎಂಪಿ ಶಾಸಕ
ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ವಿರುದ್ಧ ವಿರೋಧ ಪಕ್ಷದ ನಾಯಕರಿಂದ ಕಿಡಿ
ಕೊಳಕು ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಕೆಂಡಕಾರಿದ ಭೋಪಾಲ್ ಸೆಂಟ್ರಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್
BJP MLA Remark On Muslims At Garba Triggers Row: ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಯುವಕರು ಗರ್ಬಾ ಕಾರ್ಯಕ್ರಮಕ್ಕೆ ತಮ್ಮ ಸಹೋದರಿಯರನ್ನು ಕರೆತರಬೇಕು. ನಮ್ಮ ಹುಡುಗರು ರೆಡಿಯಾಗಿದ್ದಾರೆ ಎಂದು ನಾಲಿಗೆ ಹರಿಬಿಟ್ಟು, ಇಕ್ಕಟ್ಟಿಗೆ ಸಿಲುಕಿದ್ದಾರೆ.
ಗರ್ಬಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಪ್ರವೇಶದ ಕುರಿತು ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕನ ಭಾಷೆಯನ್ನು ಕಾಂಗ್ರೆಸ್ ಮತ್ತು AIMIM ಟೀಕಿಸಿದೆ.
ಭೋಪಾಲ್‌ನ ಹುಜೂರ್ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ, ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಗರ್ಬಾ ನೃತ್ಯ ಮಾಡಲು ಒಂಟಿಯಾಗಿ ಯಾಕೆ ಬರುತ್ತೀರಿ. ನಿಮ್ಮ ಸಹೋದರಿಯರು ಅಥವಾ ಹೆಣ್ಣುಮಕ್ಕಳನ್ನು ನಿಮ್ಮೊಟ್ಟಿಗೆ ಕರೆತನ್ನಿ. ವ್ಯಂಗ್ಯದ ನಗುವಿನೊಂದಿಗೆ, "ನಮ್ಮ ಹುಡುಗರು ಕೂಡ ಸಿದ್ಧರಿದ್ದಾರೆ" ಎನ್ನುತ್ತಲೇ ನೆರೆದಿದ್ದ ಯುವಕರು ಚೀರಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಇದೆ.
ಮುಸ್ಲಿಂರು ಶಾಶ್ವತವಾಗಿ ನಮ್ಮನ್ನು ಸೇರಲು ಬಯಸಿದರೆ ನಾವದಕ್ಕೆ ಸಿದ್ಧರಾಗಿದ್ದೇವೆ. ಬನ್ನಿ, 'ಜೈ ಶ್ರೀ ರಾಮ್' ಎಂದು ಜಪಿಸಿ ಮತ್ತು ನಿಮ್ಮ ಹಣೆಯ ಮೇಲೆ ತಿಲಕ ಹಚ್ಚಿಕೊಳ್ಳಿ. ಯಾರಿಗೂ ಅದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಇದೆ.
ಗರ್ಬಾ ಕಾರ್ಯಕ್ರಮಕ್ಕೆ ಬಂದು ಲವ್ ಜಿಹಾದ್ಗೆ ಯತ್ನಿಸಿದರೆ ನಮ್ಮ ಹುಡುಗರು ನಿಮ್ಮನ್ನು ಸುಮ್ಮನೇ ಬಿಡೋದಿಲ್ಲ. ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ನಮ್ಮ ಯುವಕರು ಹೆತ್ತವರ ಸೇವೆ ಮಾಡಬೇಕು. ತಮ್ಮ ಸಹೋದರಿಯರನ್ನು ರಕ್ಷಿಸಿಕೊಳ್ಳಬೇಕು. . ಜಗದಂಬಾ ದೇವಿಯ ಆಶೀರ್ವಾದವನ್ನು ಪಡೆಯುವುದರ ಜೊತೆಗೆ ರಾಕ್ಷಸರ ನಿರ್ಮೂಲನೆಗೆ ಸಿದ್ಧರಾಗಿರಬೇಕು ಎಂದು ಹೇಳಿದರು.
ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ದೆಹಲಿಯಲ್ಲಿ 10 ದಿನದಲ್ಲಿ 4 ಪ್ರಕರಣ ದಾಖಲು
ರಾಮೇಶ್ವರ್ ಶರ್ಮಾ ಅವರು ಮಾತನಾಡಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಇಂತಹ ಕೊಳಕು ಹೇಳಿಕೆ ನೀಡೋದನ್ನ ಮೊದಲು ನಿಲ್ಲಿಸಿ. ನಿಮ್ಮ ರೀತಿ-ನೀತಿ ಹಾಗೂ ನಿಯಮವನ್ನು ಬದಲಾಯಿಸಿಕೊಳ್ಳಿ. ಅಷ್ಟಕ್ಕೂ ಗರ್ಬಾ ಕಾರ್ಯಕ್ರಮಕ್ಕೆ ಮುಸ್ಲಿಮರು ಬರೋದಿಲ್ಲ ಎಂದು ಭೋಪಾಲ್ ಸೆಂಟ್ರಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಕೆಂಡಕಾರಿದರು.
AIMIM ಮಧ್ಯಪ್ರದೇಶದ ಅಧ್ಯಕ್ಷ ಮೊಹ್ಸಿನ್ ಅಲಿ ಖಾನ್ ಮಾತನಾಡಿ, ಮೊದಲಿಗೆ ಶರ್ಮಾ ಅವರು ಸಂವಿಧಾನವನ್ನು ಓದಿಕೊಳ್ಳಬೇಕು. ಅವರ ಹೇಳಿಕೆಯೂ ದೇಶ ವಿಭಜಿಸಲು ಸಹಾಯ ಮಾಡಿದಂತಿದೆ. ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಶಹನವಾಜ್ ಹುಸೇನ್ ಅವರಂತಹ ಬಿಜೆಪಿ ನಾಯಕರೊಂದಿಗೆ ಸಮಾಲೋಚಿಸಬೇಕು ಎಂದು ಸಲಹೆ ಕೊಟ್ಟರು.
ಗರ್ಭಾ ನೃತ್ಯಕ್ಕೆ ಮುಸ್ಲಿಂ ಯುವಕರು ತಮ್ಮ ಹೆಣ್ಣು ಮಕ್ಕಳನ್ನು ಕರೆತರಬೇಕು ಎಂತಾದರೆ, ಸನ್ವರ್ ಪಟೇಲ್, ಜಮಾಲ್ ಸಿದ್ದಿಕಿ ಮತ್ತು ಸೈಯದ್ ಜಾಫರ್ ಅವರ ಮಕ್ಕಳನ್ನು ಸಹೋದರಿಯರನ್ನು ಗರ್ಬಾಗೆ ಕರೆದುಕೊಂಡು ಹೋಗುತ್ತಾರೆಯೇ ಎಂದು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ ಮೊಹ್ಸಿನ್ ಅಲಿ ಖಾನ್, (ಏಜೆನ್ಸೀಸ್).