Shashi Tharoor | ಕಾಂಗ್ರೆಸ್​​ ಸಂಸದ ತರೂರ್  
ದೇಶ

ಪಾಶ್ಚಿಮಾತ್ಯ ವಿರೋಧಿಯಾಗುವುದು ರಾಷ್ಟ್ರೀಯ ಹಿತಾಸಕ್ತಿಗೆ ಒಳ್ಳೆಯದಲ್ಲ!....ಬ್ರಿಕ್ಸ್ ಶೃಂಗಸಭೆ ಆರಂಭಕ್ಕೂ ಮುನ್ನ ಸಂಸದ ತರೂರ್ ಮಹತ್ವದ ಸಲಹೆ! | Shashi Tharoor

ನವದೆಹಲಿ: ಬ್ರಿಕ್ಸ್ ಒಕ್ಕೂಟವು ಪಾಶ್ಚಿಮಾತ್ಯೇತರ ವೇದಿಕೆಯಾಗಿರಬೇಕೇ ಹೊರತು ಪಾಶ್ಚಿಮಾತ್ಯ ವಿರೋಧಿ ಆಗಬಾರದು ಎಂಬುದು ಭಾರತದ ನಿಲುವಾಗಿರಬೇಕು ಎಂದಿರುವ ಕಾಂಗ್ರೆಸ್​​ನ ಹಿರಿಯ ಸಂಸದ ಶಶಿ ತರೂರ್ (Shashi Tharoor), ಬ್ರಿಕ್ಸ್ ಅನ್ನು ಪಾಶ್ಚಿಮಾತ್ಯ ವಿರೋಧಿ ವೇದಿಕೆಯಾಗಿ ಬಿಂಬಿಸುವುದು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಿಟಿಐ ವಿಡಿಯೋಸ್ ಜೊತೆ ಮಾತನಾಡಿದ ತರೂರ್, ಬ್ರಿಕ್ಸ್‌ನ ಕೆಲವು ಸದಸ್ಯ ರಾಷ್ಟ್ರಗಳು ಈ ಒಕ್ಕೂಟಕ್ಕೆ ಭೌಗೋಳಿಕ ರಾಜಕೀಯ ಹಾಗೂ ಪಾಶ್ಚಿಮಾತ್ಯ ವಿರೋಧಿ ಸ್ವರೂಪ ನೀಡಲು ಕಾತುರದಿಂದ ಕಾಯುತ್ತಿದ್ದು, ಶೃಂಗಸಭೆಯ ಆತಿಥೇಯ ಮತ್ತು ಅಧ್ಯಕ್ಷ ರಾಷ್ಟ್ರವಾಗಿ ಭಾರತವು ಜಾಗತಿಕ ದಕ್ಷಿಣದ ಕಳಕಳಿಗಳನ್ನು ಎತ್ತಿಹಿಡಿಯುವ ಜೊತೆಗೆ ತನ್ನದೇ ಆದ ಹಿತಾಸಕ್ತಿಗಳನ್ನು ಮುನ್ನಡೆಸುವತ್ತ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ನಾವು ಬ್ರಿಕ್ಸ್ ಒಕ್ಕೂಟವು ಪಾಶ್ಚಿಮಾತ್ಯೇತರ ವೇದಿಕೆಯಾಗಬೇಕೆಂದು ಬಯಸುತ್ತೇವೆಯೇ ಹೊರತು ಪಾಶ್ಚಿಮಾತ್ಯ ವಿರೋಧಿಯಾಗಲು ಅಲ್ಲ. ಇದು ಪ್ರತಿಯೊಂದು ದೇಶದ ಕಾರ್ಯಸೂಚಿಯಂತಲ್ಲ. ಬ್ರಿಕ್ಸ್‌ನಲ್ಲಿರುವ ಇತರ ಕೆಲವು ದೇಶಗಳು ಇದನ್ನು ಭೌಗೋಳಿಕ ರಾಜಕೀಯ, ಪಾಶ್ಚಿಮಾತ್ಯೇತರ ಹಾಗೂ ಪಾಶ್ಚಿಮಾತ್ಯ ವಿರೋಧಿ ವೇದಿಕೆಯಾಗಿ ತೆಗೆದುಕೊಳ್ಳಲು ತುಂಬಾ ಸಂತೋಷಪಡುತ್ತವೆ ಎಂದು ತರೂರ್ ಹೇಳಿದರು

ಬ್ರಿಕ್ಸ್ ಶೃಂಗಸಭೆ ಆಯೋಜನೆ ಪ್ರತಿಷ್ಠೆಯ ವಿಷಯ!

ಬ್ರಿಕ್ಸ್ ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿರುವುದು ಪ್ರತಿಷ್ಠೆಯ ವಿಷಯವಾಗಿದೆ ಎಂದಿರುವ ತರೂರ್, ಸದಸ್ಯ ಮತ್ತು ವೀಕ್ಷಕ ದೇಶಗಳ ನಾಯಕರು ಸೇರಿದಂತೆ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳ ಮಟ್ಟದಲ್ಲಿ ಸುಮಾರು ಹನ್ನೆರಡು ದೇಶಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ಈ ಶೃಂಗಸಭೆಯು ಪ್ರಮುಖ ದ್ವಿಪಕ್ಷೀಯ ಮಾತುಕತೆಗಳಿಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ನಾಯಕರೊಂದಿಗೆ ಸಭೆಗಳನ್ನು ನಡೆಸುವ ಸಾಧ್ಯತೆ ಇದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಪ್ರಧಾನಿ ಸಭೆಗಳು ಜಾಗತಿಕ ಮಟ್ಟದಲ್ಲಿ ವಿಶೇಷ ಗಮನ ಸೆಳೆಯಲಿದ್ದು, ಇತರ ದ್ವಿಪಕ್ಷೀಯ ಚರ್ಚೆಗಳು ಸಹ ಮಹತ್ವದ್ದಾಗಿರುತ್ತವೆ ಎಂದು ತರೂರ್ ಹೇಳಿದರು.

ಆತ್ಮಗೌರವದ ಭಾರತ ಒತ್ತಡಗಳಿಗೆ ಮಣಿಯಲ್ಲ!

ಭಾರತ-ಚೀನಾ ಬಾಂಧವ್ಯದ ಕುರಿತು ಮಾತನಾಡಿದ ತರೂರ್, ದ್ವಿಪಕ್ಷೀಯ ಸಂಬಂಧದಲ್ಲಿನ ಸಮಸ್ಯೆಗಳು ಸಂಪೂರ್ಣವಾಗಿ ಚೀನಾ ಕಡೆಯಿಂದಲೇ ಬಂದಿದ್ದು, 2020 ರ ಗಲ್ವಾನ್ ಸಂಘರ್ಷದ ನಂತರ ಸಂಬಂಧಗಳು ಉದ್ವಿಗ್ನವಾಗಿಯೇ ಉಳಿದಿವೆ ಎಂದು ಹೇಳಿದರು. ಗಡಿರೇಖೆಯನ್ನು ಸ್ಪಷ್ಟಪಡಿಸದ ಪ್ರದೇಶಗಳಲ್ಲಿ ವಾಸ್ತವ ಸ್ಥಿತಿಯನ್ನು ಬದಲಾಯಿಸಲು ಚೀನಾ ಯತ್ನಿಸುತ್ತಿದೆ, ಅನಗತ್ಯ ಹೇಳಿಕೆಗಳನ್ನು ನೀಡುತ್ತಿದೆ ಮತ್ತು ಭಾರತೀಯರಿಗೆ ವೀಸಾ ನೀಡುವಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತಿದೆ. ಭಾರತೀಯ ಆಮದುದಾರರು ಅವಲಂಬಿತವಾಗಿರುವ ಅಗತ್ಯ ವಸ್ತುಗಳನ್ನು ತಡೆಹಿಡಿಯುವ ಮೂಲಕ ಬೀಜಿಂಗ್ ತನ್ನ ವ್ಯಾಪಾರ ಪ್ರಭಾವವನ್ನು ಬಳಸಿಕೊಂಡಿದೆ ಎಂದೂ ತರೂರ್ ಆರೋಪಿಸಿದರು.
ಆತ್ಮಗೌರವದ ಭಾರತವು ಇಂತಹ ಒತ್ತಡಗಳಿಗೆ ಮಣಿಯುವುದಿಲ್ಲ. ನಮ್ಮ ಹಿತಾಸಕ್ತಿಗಾಗಿ ನಾವು ದಿಟ್ಟವಾಗಿ ನಿಲ್ಲುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಭೇಟಿಯು ಅತ್ಯಂತ ಮಹತ್ವದ್ದಾಗಿದೆ. ಕಳೆದ ಆರು ವರ್ಷಗಳಿಗೆ ಹೋಲಿಸಿದರೆ, ಚೀನಾ ಈ ಬಾರಿ ಭಾರತದೊಂದಿಗೆ ಹೆಚ್ಚಿನ ನಮ್ಯತೆ, ತಿಳುವಳಿಕೆ ಮತ್ತು ಸ್ನೇಹಪರ ನಿಲುವನ್ನು ತೋರಿಸಬೇಕಿದೆ ಎಂದು ಅವರು ಹೇಳಿದರು.

ಗ್ಲೋಬಲ್ ಸೌತ್‌ ಮೇಲಿನ ಗಮನ

ಬ್ರಿಕ್ಸ್ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಒಂದು ಪ್ರಮುಖ ವೇದಿಕೆಯಾಗಿದೆ ಎಂದ ತರೂರ್, ಇದರ 11 ಸದಸ್ಯ ರಾಷ್ಟ್ರಗಳು ವಿಶ್ವದ ಬಹುಸಂಖ್ಯಾತ ಜನಸಂಖ್ಯೆಯನ್ನು ಮತ್ತು ಜಾಗತಿಕ ಜಿಡಿಪಿಯ ಶೇಕಡಾ 41 ರಷ್ಟನ್ನು ಪ್ರತಿನಿಧಿಸುತ್ತವೆ ಎಂದು ಎತ್ತಿ ತೋರಿಸಿದರು. ಶೃಂಗಸಭೆಯಲ್ಲಿ ಉನ್ನತ ನಾಯಕರ ಉಪಸ್ಥಿತಿಯು ಭಾರತದ ರಾಜತಾಂತ್ರಿಕ ಒಟ್ಟುಗೂಡಿಸುವ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅದೇ ಸಮಯದಲ್ಲಿ, ಪ್ರಮುಖ ಜಾಗತಿಕ ವಿಷಯಗಳಲ್ಲಿ ಬ್ರಿಕ್ಸ್ ಸದಸ್ಯರ ನಡುವೆ ಸಾಮಾನ್ಯ ಸಮ್ಮತಿಯನ್ನು ಕಂಡುಕೊಳ್ಳುವಲ್ಲಿನ ಕಷ್ಟವನ್ನು ಅವರು ಒಪ್ಪಿಕೊಂಡರು.
ಬ್ರಿಕ್ಸ್ ವಿದೇಶಾಂಗ ಸಚಿವರ ಹಿಂದಿನ ಸಭೆಗಳನ್ನು ಉಲ್ಲೇಖಿಸಿದ ತರೂರ್, ಇರಾನ್-ಇರಾಕ್ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಇತರ ಪ್ರಮುಖ ವಿಷಯಗಳಲ್ಲಿ ಒಮ್ಮತಕ್ಕೆ ಬರಲು ಈ ಒಕ್ಕೂಟ ವಿಫಲವಾಗಿದೆ ಎಂದು ಹೇಳಿದರು. ಪರಿಣಾಮವಾಗಿ, ಅಧ್ಯಕ್ಷ ರಾಷ್ಟ್ರವಾಗಿ ಭಾರತವು ಜಂಟಿ ಘೋಷಣೆಯ ಬದಲಿಗೆ ಅಧ್ಯಕ್ಷರ ಘೋಷಣೆಯನ್ನು ಹೊರಡಿಸಿತ್ತು ಎಂದು ಅವರು ವಿವರಿಸಿದರು.
ಶೃಂಗಸಭೆಯಲ್ಲೂ ಇಂತಹುದೇ ಫಲಿತಾಂಶ ಬಂದರೆ ಅದನ್ನು ಕೆಲವರು ಹಿನ್ನಡೆ ಎಂದು ನೋಡಬಹುದು ಮತ್ತು ಇದು ಭಾರತದ ರಾಜತಾಂತ್ರಿಕತೆಗೆ ಸವಾಲೊಡ್ಡಬಹುದು ಎಂದು ಅವರು ಹೇಳಿದರು.

ಚಿದಂಬರಂಗೆ ಪರೋಕ್ಷ ತಿರುಗೇಟು ನೀಡಿದ್ದ ಸಂಸದ ಶಶಿ ತರೂರ್!

ಬ್ರಿಕ್ಸ್ ಶೃಂಗಸಭೆಯಿಂದ ಭಾರತಕ್ಕೆ ಸಿಕ್ಕಿರುವ ಪ್ರಯೋಜನಗಳು ಏನು ಎಂದು ಪ್ರಶ್ನಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂಗೆ, ಅವರದೇ ಪಕ್ಷದ ಸಂಸದ ಶಶಿ ತರೂರ್ ಅವರು ಬ್ರಿಕ್ಸ್ ಒಕ್ಕೂಟವು ಭಾರತದ ರಾಜತಾಂತ್ರಿಕ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಮುನ್ನ ಮಾತನಾಡಿದ ತರೂರ್, ಈ ಒಕ್ಕೂಟವು ಜಾಗತಿಕ ದಕ್ಷಿಣದ ದೇಶಗಳಿಗೆ ಒಂದು ಪ್ರಮುಖ ವೇದಿಕೆಯಾಗಿದೆ ಎಂದಿದ್ದಾರೆ(ಏಜೆನ್ಸೀಸ್​).