ಸಾಂದರ್ಭಿಕ ಚಿತ್ರ  
ದೇಶ

ತಾಯಿಯ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ: ಈ ಬಗ್ಗೆ ವೈದ್ಯರು ಹೇಳುವುದೇನು? Breast Milk

ಪ್ರಮುಖ ಮುಖ್ಯಾಂಶಗಳು

  • ನವಜಾತ ಶಿಶುಗಳಿಗೆ ಎದೆಹಾಲು ತುಂಬಾನೇ ಮುಖ್ಯ
  • ಎದೆಹಾಲು ಕುಡಿದ ಶಿಶುಗಳು ಪರಿಪೂರ್ಣ ಆರೋಗ್ಯದಿಂದ ಬೆಳೆಯುತ್ತಾರೆ
  • ಇದೀಗ ಎದೆಹಾಲು ಕುರಿತು ಹೊರಬಿದ್ದಿರುವ ಸುದ್ದಿ ಆಘಾತಕಾರಿಯಾಗಿದೆ
  • ಹಾಲಿನಲ್ಲಿ ವಿಕಿರಣಶೀಲ ವಸ್ತು ಯುರೇನಿಯಂ ಇರುವುದು ಕಂಡುಬಂದಿದೆ
ನವದೆಹಲಿ: ನವಜಾತ ಶಿಶುಗಳಿಗೆ ಎದೆಹಾಲು ( Breast Milk ) ತುಂಬಾನೇ ಮುಖ್ಯ. ತಾಯಿ ಆದವಳು ತನ್ನ ಮಗುವಿಗೆ ನೀಡುವ ಅದ್ಭುತ ಉಡುಗೊರೆ ಅಂದರೆ ಅದು ಎದೆಹಾಲು ಮಾತ್ರ. ಏಕೆಂದರೆ, ಎದೆಹಾಲು ಕುಡಿದ ಶಿಶುಗಳು ಪರಿಪೂರ್ಣ ಆರೋಗ್ಯದಿಂದ ಬೆಳೆಯುತ್ತಾರೆ ಎಂದು ವೈದ್ಯರೇ ಹೇಳುತ್ತಾರೆ.
ಆದರೆ, ಇದೀಗ ಎದೆಹಾಲು ಕುರಿತು ಹೊರಬಿದ್ದಿರುವ ಸುದ್ದಿಯೊಂದು ಆಘಾತಕಾರಿಯಾಗಿದೆ. ಅದೇನೆಂದರೆ, ಇತ್ತೀಚೆಗೆ, ಬಿಹಾರದ ವಿಜ್ಞಾನಿಗಳು ಎದೆಹಾಲಿನ ಬಗ್ಗೆ ಸಂಶೋಧನೆ ನಡೆಸಿದರು. ಹಾಲಿನಲ್ಲಿ ವಿಕಿರಣಶೀಲ ವಸ್ತು ಯುರೇನಿಯಂ ಇರುವುದು ಕಂಡುಬಂದಿದೆ.
ಪಟನಾದ ಮಹಾವೀರ್ ಕ್ಯಾನ್ಸರ್ ಸಂಸ್ಥಾನ ಮತ್ತು ಸಂಶೋಧನಾ ಕೇಂದ್ರ, ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ ಮತ್ತು ನವದೆಹಲಿಯ AIIMS ನ ವಿಜ್ಞಾನಿಗಳ ತಂಡ ಬಿಹಾರದಲ್ಲಿ ಒಂದು ಅಧ್ಯಯನವನ್ನು ನಡೆಸಿತು. ಬ್ರಿಟಿಷ್ ಜರ್ನಲ್ 'ಸೈಂಟಿಫಿಕ್ ರಿಪೋರ್ಟ್ಸ್' ನ ವರದಿಯ ಪ್ರಕಾರ, ಬಿಹಾರದ ಎದೆಹಾಲು ಮಾದರಿಗಳಲ್ಲಿ 5 ppb (ಭಾಗಗಳು ಪ್ರತಿ ಬಿಲಿಯನ್) ವರೆಗೆ ಯುರೇನಿಯಂ ಕಂಡುಬಂದಿದೆ.
ಈ ಬಗ್ಗೆ ದೆಹಲಿಯ ಏಮ್ಸ್‌ನ ವೈದ್ಯ ಡಾ. ಅಶೋಕ್ ಶರ್ಮ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಾವು ಬಿಹಾರದ ವಿವಿಧ ಹಳ್ಳಿಗಳಿಂದ 40 ತಾಯಂದಿರಿಂದ ಹಾಲು ಸಂಗ್ರಹಿಸಿ ಪರೀಕ್ಷಿಸಿದ್ದೇವೆ. ಅದರಲ್ಲಿ ಯುರೇನಿಯಂ ಇರುವುದು ಕಂಡುಬಂದಿದೆ ಎಂದಿದ್ದಾರೆ.
ಎದೆ ಹಾಲಿನಲ್ಲಿ ಯುರೇನಿಯಂ ಮಟ್ಟ ಕಡಿಮೆ ಇದೆ. ಆದರೆ, ಇದನ್ನು ಕುಡಿಯುವ ಶಿಶುಗಳು ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಲ್ಲದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ತಾಯಂದಿರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಅಶೋಕ್ ಶರ್ಮ ಹೇಳಿದರು.
ಮತ್ತೊಂದೆಡೆ, ಹಿರಿಯ ವಿಜ್ಞಾನಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಅಧಿಕಾರಿ ಡಾ. ದಿನೇಶ್ ಅಸ್ವಾಲ್ ಕೂಡ ಎದೆ ಹಾಲಿನಲ್ಲಿ ಯುರೇನಿಯಂ ಇರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎದೆ ಹಾಲಿನಲ್ಲಿ ಅಲ್ಪ ಪ್ರಮಾಣದ ಯುರೇನಿಯಂ ಇದೆ. ಆದರೆ, ಇದು ಶಿಶುಗಳಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.
ಪರೀಕ್ಷೆಯಲ್ಲಿ ಕಂಡುಬಂದ ಯುರೇನಿಯಂ ಮಾದರಿಗಳು ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮತಿಸಿದ ಮಿತಿಗಿಂತ ಕಡಿಮೆಯಿದೆ. ಹಾಗಾಗಿ ಯುರೇನಿಯಂ ವಿಷಯದಲ್ಲಿ ಚಿಂತಿಸುವ ಅಗತ್ಯವಿಲ್ಲ ಎಂದು ದಿನೇಶ್​ ಅಸ್ವಾಲ್​, ಪೋಷಕರಿಗೆ ಭರವಸೆ ನೀಡಿದ್ದಾರೆ.
ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಮಣ್ಣಿನಲ್ಲಿ ನೈಸರ್ಗಿಕ ಪ್ರಮಾಣದ ಯುರೇನಿಯಂ ಇದೆ. ಹಾಲುಣಿಸುವ ತಾಯಿಗೆ ಪ್ರವೇಶಿಸುವ ಹೆಚ್ಚಿನ ಯುರೇನಿಯಂ ಮೂತ್ರದಲ್ಲಿ ಹೊರಹಾಕಲ್ಪಡುತ್ತದೆ. ಆದ್ದರಿಂದ ಎದೆ ಹಾಲಿನಲ್ಲಿ ಅಲ್ಪ ಪ್ರಮಾಣದ ಯುರೇನಿಯಂ ಇದೆ ಎಂದು ದಿನೇಶ್​ ಅವರು ತಿಳಿಸಿದರು, (ಏಜೆನ್ಸೀಸ್​).