ಕೇಂದ್ರ ಗೃಹ ಸಚಿವ ಅಮಿತ್ ಶಾ 
ದೇಶ

ಕಾಮಾಲೆ ಕಣ್ಣಿನವರಿಗೆ ಅಭಿವೃದ್ಧಿ ಕಾಣ್ತಿಲ್ಲ; ಯುಪಿಯಲ್ಲಿ ತಯಾರಾಗುವ ಬ್ರಹ್ಮೋಸ್ ಕ್ಷಿಪಣಿಗಳಿಂದ ಪಾಕಿಸ್ತಾನದ ನಿದ್ರೆ ಹಾಳು: ಅಮಿತ್ ಶಾ| Amit Shah

ಉತ್ತರ ಪ್ರದೇಶದಲ್ಲಿ ರಕ್ಷಣಾ ಉಪಕರಣಗಳ ಉತ್ಪಾದನೆಯೂ ರಾಜ್ಯ ಮತ್ತು ದೇಶದ ಪರಿವರ್ತನೆಯ ಸಂಕೇತವಾಗಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿಯಲ್ಲಿ ತಯಾರಾಗುವ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ನಿದ್ರೆಯನ್ನು ಹಾಳು ಮಾಡುತ್ತಿವೆ ಎಂದು ಹೇಳಿದ್ದಾರೆ.

ನವದೆಹಲಿ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉಪಕರಣಗಳ ಉತ್ಪಾದನೆಯೂ ರಾಜ್ಯ ಮತ್ತು ದೇಶದ ಪರಿವರ್ತನೆಯ ಸಂಕೇತವಾಗಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿಯಲ್ಲಿ ತಯಾರಾಗುವ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ನಿದ್ರೆಯನ್ನು ಹಾಳು ಮಾಡುತ್ತಿವೆ ಎಂದು ಹೇಳಿದ್ದಾರೆ.

ಶುಕ್ರವಾರ(ಸೆ. 25) ಗ್ರೇಟರ್ ನೋಯ್ಡಾದಲ್ಲಿ ನಡೆದ ಯುಪಿ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ-2026 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಅವರು, ಕಾಮಾಲೆ ಕಣ್ಣಿನವರಿಗೆ ಭಾರತದ ಅಭಿವೃದ್ಧಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಾವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ.

ಈ ಒಪ್ಪಂದಗಳು ನಮ್ಮ ಕೈಗಾರಿಕೆಗಳ ರಫ್ತು ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿವೆ ಮತ್ತು ವಿವಿಧ ಸವಾಲುಗಳ ನಡುವೆಯೂ ನಾವು ನಮ್ಮ ಬೆಳವಣಿಗೆಯನ್ನು ಕಾಯ್ದುಕೊಂಡಿದ್ದೇವೆ... ರಕ್ಷಣಾ ಕಾರಿಡಾರ್‌ನ ಆರು ಕೇಂದ್ರಗಳಾದ ಝಾನ್ಸಿ, ಚಿತ್ರಕೂಟ, ಲಕ್ನೋ, ಆಗ್ರಾ, ಅಲಿಗಢ ಮತ್ತು ಕಾನ್ಪುರಗಳಿಗೆ ರಕ್ಷಣಾ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದ ಹೂಡಿಕೆಗಳು ಹರಿದುಬರುತ್ತಿವೆ ಎಂದಿದ್ದಾರೆ.

ಮುಂದುವರೆದು, ಇದು ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ರಕ್ಷಣಾ ಉತ್ಪನ್ನಗಳ ಅಭಿವೃದ್ಧಿಗೆ ಉತ್ತೇಜನ ನೀಡಿದೆ. ಇಂದು ಉತ್ತರ ಪ್ರದೇಶದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ಉಂಟುಮಾಡುತ್ತಿವೆ ಎಂದು ಪ್ರತಿಪಾದಿಸಿದ್ದಾರೆ.

ಇದು ದೇಶದ ಪರಿವರ್ತನೆಯ ಸಂಕೇತವಾಗಿದೆ. ಅದೇ ರೀತಿ, ಅಮೇಠಿಯಲ್ಲಿ ತಯಾರಾದ ಎಕೆ-203 (AK-203) ಅಸಾಲ್ಟ್ ರೈಫಲ್‌ಗಳು ನಕ್ಸಲರು ಮತ್ತು ಭಯೋತ್ಪಾದಕರಿಗೂ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತಿವೆ ಎಂದಿದ್ದಾರೆ (ಏಜೆನ್ಸೀಸ್).