ಅಪ್ಪ-ಅಮ್ಮನ ವಿರುದ್ಧ 3 ವರ್ಷದ ಬಾಲಕನಿಂದ ದೂರು
- ಚಾಕೊಲೇಟ್ ತಿನ್ನಲು ಬಿಡದ ಅಮ್ಮ-ಅಪ್ಪನ ವಿರುದ್ಧ ಬಾಲಕನ ದೂರು
- ಅಮ್ಮ-ಅಪ್ಪನನ್ನು ಹಿಡಿದು ಜೈಲಿಗೆ ಹಾಕಿ ಎಂದು ಪೊಲೀಸರಿಗೆ ಮನವಿ
- ಮುದ್ದಾದ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಮಧ್ಯಪ್ರದೇಶ: ಚಾಕೊಲೇಟ್ ತಿನ್ನಲು ಬಿಡುತ್ತಿಲ್ಲ ಎಂದು ಅಮ್ಮ-ಅಪ್ಪ ವಿರುದ್ಧ ದೂರು ನೀಡಲು, 3 ವರ್ಷದ ಪುಟ್ಟ ಬಾಲಕನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಮುದ್ದಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಾಲಕನ ಮುಗ್ಧ ಮಾತುಗಳು ಹಾಗೂ ಪೊಲೀಸರ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬುರ್ಹಾನ್‌ಪುರ್ ಜಿಲ್ಲೆಯ ದೇಡತಲಾಯಿ ಪೊಲೀಸ್ ಚೌಕಿಗೆ 3 ವರ್ಷದ ಹಮ್ಜಾ ಎಂಬ ಬಾಲಕ ತನ್ನ ತಂದೆಯೊಂದಿಗೆ ಬಂದಿದ್ದಾನೆ. ತನ್ನ ತಾಯಿ ತನಗೆ ಚಾಕೊಲೇಟ್ ತಿನ್ನಲು ಬಿಡಲ್ಲ, ಸದಾ ಬೈಯುತ್ತಾರೆ ಎಂದು ಪೊಲೀಸ್ ಅಧಿಕಾರಿಯ ಎದುರು ದೂರು ಹೇಳಿದ್ದಾನೆ. ಬಾಲಕನ ಕಂಪ್ಲೇಂಟ್ ಅನ್ನು ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್ ಸಹನೆಯಿಂದ ಕೇಳಿಸಿಕೊಂಡಿದ್ದಾರೆ. ಆ ಪುಟ್ಟ ಬಾಲಕ ತೊದಲು ನುಡಿಗಳಲ್ಲಿ ಗಂಭೀರವಾಗಿ ತನ್ನ ಸಮಸ್ಯೆಯನ್ನು ಹೇಳುತ್ತಿರುವುದನ್ನು ಕಂಡು ಪೊಲೀಸ್ಗೂ ನಗು ತಡೆಯಲಾಗಿಲ್ಲ.
ಅಪ್ಪ-ಅಮ್ಮನ್ನು ಹಿಡಿದು ಜೈಲಿಗೆ ಹಾಕಿ
ಇನ್ನು, ದೂರು ಬರೆದ ಹಾಳೆಯ ಮೇಲೆ ಬಾಲಕನಿಗೆ ಸಹಿ ಮಾಡುವಂತೆ ಪೆನ್ ನೀಡಿದ್ದರು. ಆಗ ಹಮ್ಜಾ ಪೆನ್ ಹಿಡಿದು ಕಾಗದದ ಮೇಲೆ ಏನೋ ಬರೆಯುವಂತೆ ಮಾಡಿದ್ದಾನೆ. ಇಷ್ಟಕ್ಕೆ ನಿಲ್ಲದ ಬಾಲಕ, ‘ನನ್ನ ಅಪ್ಪ-ಅಮ್ಮನ್ನು ಹಿಡಿದು ಜೈಲಿಗೆ ಹಾಕಿ’ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾನೆ. ಇದನ್ನು ಕೇಳಿ ಠಾಣೆಯಲ್ಲಿದ್ದ ಪೊಲೀಸರು ನಕ್ಕಿದ್ದಾರೆ.
ವಿಡಿಯೋ ವೈರಲ್
ಈ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟ್ಟ ಬಾಲಕನ ಚಾಕೊಲೇಟ್ ತಿನ್ನುವ ಆಸೆ ಎಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಕ್ಕಳ ಮುಗ್ಧತೆಗೆ ನಿಜಕ್ಕೂ ಸಾಟಿಯಿಲ್ಲ ಎನ್ನುವುದಕ್ಕೆ ಈ ಸನ್ನಿವೇಶ ಮತ್ತೊಂದು ಉದಾಹರಣೆ,(ಏಜೆಸ್ಸೀಸ್).