ಮುಂಬೈ: ಮಹಾರಾಷ್ಟ್ರದ ಧುಲೆ ಜಿಲ್ಲೆಯ ತಾಪಿ ನದಿಯಲ್ಲಿ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಬೀಗ ಹಾಕಿದ ಸ್ಥಿತಿಯಲ್ಲಿ ನವದಂಪತಿಯ ಶವಗಳು ಪತ್ತೆಯಾಗಿದೆ ಎಂದು ಶುಕ್ರವಾರ(ಅ. 09) ವರದಿಯಾಗಿದೆ.
ಧುಲೆ ಜಿಲ್ಲೆಯ ಸವಾಲ್ಡೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಜಲಗಾಂವ್ ಜಿಲ್ಲೆಯ ಶ್ಯಾಮಹರಿ ಪಾಟೀಲ್ ಮತ್ತು ಸ್ವಪ್ನಾ ಪಾಟೀಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರೂ ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲೂಕಿನವರು. ಕೆಲವು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು ಎನ್ನಲಾಗಿದೆ.
ದಂಪತಿಗಳ ಕಾಲಿಗೆ ಕಬ್ಬಿಣದ ಸರಪಳಿಯಿಂದ ಕಟ್ಟಿ ಬೀಗ ಹಾಕಿದ್ದು, ನೀರಿನ ತಳಭಾಗದಲ್ಲಿ ಮೃತದೇಹಗಳು ಕಂಡು ಬಂದಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ನವವಿವಾಹಿತರು ಕೊಲೆಯಾಗಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಅವರ ಸಾವಿಗೆ ಕಾರಣ ಸ್ಪಷ್ಟವಾಗುವ ಸಾಧ್ಯತೆಯಿದೆ. ಸಾವಿನ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ (ಏಜೆನ್ಸೀಸ್).