ಘಟನೆಯ ಸ್ಥಳ 
ದೇಶ

ಮಥುರಾದ ಯಮುನಾ ನದಿಯಲ್ಲಿ ಮಗುಚಿದ 30 ಭಕ್ತರಿದ್ದ ದೋಣಿ; 10 ಮಂದಿ ಸಾವು | Yamuna river

ಲಖನೌ: ಉತ್ತರ ಪ್ರದೇಶದ ಮಥುರಾದ ಯಮುನಾ ನದಿಯ(Yamuna river) ಕೇಶಿ ಘಾಟ್​ನಲ್ಲಿ ಇಂದು(ಏ. 10) ಪಂಜಾಬ್​ನ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿ ಘಟನೆ ನಡೆದಿದೆ. ಲೂದಿಯಾನದಿಂದ ಬಂದ 30ಕ್ಕೂ ಹೆಚ್ಚು ಮಂದಿಯ ಗುಂಪು ಎರಡು ದೋಣಿಗಳನ್ನು ಬಾಡಿಗೆ ಪಡೆದು ಯಮುನಾ ನದಿಯಲ್ಲಿ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಹಠಾತ್ ದೋಣಿ ಮಗುಚಿ ಬಿದ್ದಿದೆ. 22 ಜನರನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದು, ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಪ್ರತ್ಯಕ್ಷದರ್ಶಿಯ ಪ್ರಕಾರ, ಜೋರಾದ ಗಾಳಿಯಿಂದಾಗಿ ದೋಣಿ ನದಿಯ ಮಧ್ಯದಲ್ಲಿ ತೀವ್ರವಾಗಿ ತೂಗಾಡಲು ಪ್ರಾರಂಭಿಸಿತು, ಅದರ ವೇಗ ಹೆಚ್ಚಾಯಿತು ಮತ್ತು ಅದು ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಮಗುಚಿ ಬಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್, ಪಾಂಟೂನ್ ಸೇತುವೆ ಇರುವ ಸ್ಥಳದಲ್ಲಿ ದೋಣಿ ಮಗುಚಿ ಬಿದ್ದಿದೆ. ಪರಿಣಾಮ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಉಳಿದ 22 ಮಂದಿಯನ್ನು ರಕ್ಷಿಸಲಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೂ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್, ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸುವಂತೆ, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ತ್ವರಿತ ನೆರವು ನೀಡುವಂತೆ ಸೂಚನೆ ನೀಡಿದ್ದಾರೆ (ಏಜೆನ್ಸೀಸ್).