9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಕ್ಕೆ ಮಗನಿಗೆ 1.62 ಕೋಟಿ ಬೆಲೆಯ BMW ಕಾರು ಗಿಫ್ಟ್ ಕೊಟ್ಟ ತಂದೆ! 
ದೇಶ

9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಕ್ಕೆ ಮಗನಿಗೆ 1.62 ಕೋಟಿ ಬೆಲೆಯ BMW ಕಾರು ಗಿಫ್ಟ್ ಕೊಟ್ಟ ತಂದೆ! BMW Gift

ತಂದೆಯ ಮಾತಿನಂತೆ ತಲ್ಹಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದನು. ಮಗನ ಫಲಿತಾಂಶ ಬಂದ ತಕ್ಷಣವೇ ತಂದೆ ಶಂಸುದ್ದೀನ್ ಮುಂಬೈಗೆ ಪ್ರಯಾಣ ಬೆಳೆಸಿ, ಅಂಧೇರಿಯಲ್ಲಿರುವ ಷೋರೂಂ ಒಂದರಲ್ಲಿ ಆ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಕೋಲ್ಕತ: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ತಮ್ಮ ಮಕ್ಕಳು ಅತ್ಯುತ್ತಮ ಅಂಕ ಗಳಿಸಿದಾಗ ತಂದೆ-ತಾಯಂದಿರು ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಉಡುಗೊರೆಯಿಂದಲೇ ದೇಶಾದ್ಯಂತ ಸಖತ್​ ಸುದ್ದಿಯಾಗಿದ್ದಾನೆ. ಅಷ್ಟಕ್ಕೂ ಆತ ನೀಡಿದ ಗಿಫ್ಟ್​ ಏನೆಂದರೆ, ಐಷಾರಾಮಿ BMW ಕಾರು ( BMW Gift ). ಅದು ಕೂಡ 9ನೇ ತರಗತಿಯಲ್ಲಿ ತಮ್ಮ ಮಗ ಪಾಸಾದ ಅಂತ ಇಂಥದ್ದೊಂದು ಉಡುಗೊರೆ ನೀಡಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಹೌದು, 9ನೇ ತರಗತಿಯಲ್ಲಿ ಓದುತ್ತಿರುವ ತನ್ನ 15 ವರ್ಷದ ಮಗ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಕ್ಕಾಗಿ ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಗಿಫ್ಟ್ ನೀಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಪರಾಜ್ ಗ್ರಾಮದಲ್ಲಿ ನಡೆದಿರುವ ಈ ಘಟನೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಸ್ಥಳೀಯ ಉದ್ಯಮಿ ಶಂಸುದ್ದೀನ್ ಮಿಡ್ಯಾ ಅವರ 15 ವರ್ಷದ ಮಗ ಮೊಹಮ್ಮದ್ ತಲ್ಹಾನಿಗೆ 'ಬಿಎಂಡಬ್ಲ್ಯೂ ಎಮ್​​4 ಕಾಂಪಿಟೇಷನ್' (BMW M4 Competition) ಕಾರು ಎಂದರೆ ವಿಪರೀತ ಕ್ರೇಜ್. ಮಗನ ಈ ಇಷ್ಟವನ್ನು ಅರಿತ ತಂದೆ, 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಆತನಿಗೆ ಇಷ್ಟವಾದ ಕಾರನ್ನು ಕೊಡಿಸುವುದಾಗಿ ಮಾತು ನೀಡಿದ್ದರು. ತಂದೆಯ ಮಾತಿನಂತೆ ತಲ್ಹಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದನು. ಮಗನ ಫಲಿತಾಂಶ ಬಂದ ತಕ್ಷಣವೇ ತಂದೆ ಶಂಸುದ್ದೀನ್ ಮುಂಬೈಗೆ ಪ್ರಯಾಣ ಬೆಳೆಸಿ, ಅಂಧೇರಿಯಲ್ಲಿರುವ ಷೋರೂಂ ಒಂದರಲ್ಲಿ ಆ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಮುಂಬೈನಲ್ಲಿ ಖರೀದಿಸಲಾದ ಈ ಬೆಲೆಬಾಳುವ ಕಾರನ್ನು ವಿಶೇಷವಾದ ಬೃಹತ್ ಕಂಟೇನರ್ ಮೂಲಕ ಮುಂಬೈನಿಂದ ಪಶ್ಚಿಮ ಬಂಗಾಳದ ಪರಾಜ್ ಗ್ರಾಮಕ್ಕೆ ನವೆಂಬರ್ 6 ರಂದು ತರಿಸಲಾಯಿತು. ತಮ್ಮ ಸಣ್ಣ ಗ್ರಾಮಕ್ಕೆ ಅಷ್ಟು ದೊಡ್ಡ ಐಷಾರಾಮಿ ಕಾರು ಬಂದಿರುವುದನ್ನು ನೋಡಲು ಸ್ಥಳೀಯ ಗ್ರಾಮಸ್ಥರು ತಂಡೋಪತಂಡವಾಗಿ ನೆರೆದಿದ್ದರು. ಈ ಘಟನೆಯ ವಿಡಿಯೋ ಹಾಗೂ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಇಷ್ಟು ಸಣ್ಣ ವಯಸ್ಸಿನ ಮಗನಿಗೆ ಕೋಟಿ ಬೆಲೆಯ ಕಾರು ಗಿಫ್ಟ್ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ.

ಈ ಕುರಿತು ಇಂಟರ್‌ನೆಟ್‌ನಲ್ಲಿ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಂದೆಯು ಮಗನ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸಿ ಪರೀಕ್ಷೆಗೆ ಹುರಿದುಂಬಿಸಿದ್ದಾರೆ ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇಷ್ಟೊಂದು ಚಿಕ್ಕ ವಯಸ್ಸಿನ ಮಗುವಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ, ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಗನಿಗೆ ತಂದೆ ನೀಡಿದ ಈ ಅದ್ದೂರಿ ಗಿಫ್ಟ್ ಮಾತ್ರ ಭಾರಿ ಸದ್ದು ಮಾಡುತ್ತಿದೆ, (ಏಜೆನ್ಸೀಸ್​).