ದೇಶ

ಸೋನಿಯಾ ಆತ್ಮಕಥೆಗೆ ಐಫೋನ್‌ನಷ್ಟೇ ಕ್ರೇಜ್ ಅಂತೆ: ಪುಸ್ತಕ ಗಿಟ್ಟಿಸಿಕೊಂಡ ಮಹಿಳೆಯ ಮಾತು ವೈರಲ್! ಬಿಲಾಂಗಿಂಗ್​ಗೆ ಯಾಕಿಷ್ಟು ಬೇಡಿಕೆ? | Sonia Gandhi Memoir

ನವದೆಹಲಿ: ಸಾಮಾನ್ಯವಾಗಿ ಆಸ್ಪತ್ರೆಯ ವೈಟಿಂಗ್ ರೂಮ್‌ಗಳಲ್ಲಿ ಪುಸ್ತಕ ಪ್ರೇಮಿಗಳ ಚರ್ಚೆ ನಡೆಯುವುದು ವಿರಳ. ಆದರೆ, ಮಾಧ್ಯಮ ವೃತ್ತಿಪರರಾದ ವಿನೀತಾ ಕುಮಾರ್ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅನಿರೀಕ್ಷಿತ ಅನುಭವವೊಂದು ಎದುರಾಯಿತಂತೆ. ಒಂದು ಗಂಟೆಯ ಹಿಂದಷ್ಟೇ ಪತಿ ಉಡುಗೊರೆಯಾಗಿ ನೀಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕವನ್ನು ಹಿಡಿದು ಕುಳಿತಿದ್ದ ವಿನೀತಾ ಅವರತ್ತ ಅಲಿದ್ದ ರೋಗಿಗಳು ಹಾಗೂ ಯುರೋಪ್‌ನಿಂದ ಬಂದಿದ್ದ ವೈದ್ಯಕೀಯ ಪ್ರವಾಸಿಗರೊಬ್ಬರು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಲಾರಂಭಿಸಿದರು.

ಆಸ್ಪತ್ರೆಯ ವೈದ್ಯರು ಸಹ ಈ ಪುಸ್ತಕದ ಬಗ್ಗೆ ಆಸಕ್ತಿ ತೋರಿ, ಮೇನಕಾ ಗಾಂಧಿ ಮತ್ತು ಸಂಜಯ್ ಗಾಂಧಿ ಅವರ ಕುರಿತಾದ ಪುಸ್ತಕದ ವಿವರಗಳನ್ನು ಚರ್ಚಿಸಲು ತಮ್ಮ ಸಮಾಲೋಚನೆಯ ಅವಧಿಯನ್ನು ಹತ್ತು ನಿಮಿಷಗಳ ಕಾಲ ವಿಸ್ತರಿಸಿದರು. ಗಾಂಧಿ ಕುಟುಂಬದ ಬಗೆಗಿನ ಈ ಕುತೂಹಲವೇ ಈ ಪುಸ್ತಕದ ಅಸಾಧಾರಣ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕಳೆದ ನವೆಂಬರ್ 10 ರಂದು ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ 544 ಪುಟಗಳ ಆತ್ಮಕಥೆಯು ಬಿಡುಗಡೆಗೂ ಮುನ್ನವೇ ಪ್ರಕಾಶಕರ ಬದಲಾವಣೆಯ ಕಾರಣದಿಂದ ಸುದ್ದಿಯಲ್ಲಿತ್ತು. ಪುಸ್ತಕ ಮಾರುಕಟ್ಟೆಗೆ ಬಂದ ತಕ್ಷಣವೇ ಆನ್‌ಲೈನ್ ವೇದಿಕೆಗಳಲ್ಲಿ ಪ್ರತಿಗಳು ಕ್ಷಣಾರ್ಧದಲ್ಲಿ ಖಾಲಿಯಾಗತೊಡಗಿವೆ. ಬ್ಲಿಂಕಿಟ್​ನಂತಹ ಆ್ಯಪ್‌ಗಳಲ್ಲಿ ಸ್ಟಾಕ್ ಮುಗಿದುಹೋಗಿದ್ದರೆ, ಅಮೆಜಾನ್‌ನಲ್ಲಿ ಪುಸ್ತಕ ತಲುಪಲು ಕನಿಷ್ಠ ಒಂದು ವಾರ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಸೋನಿಯಾ ಗಾಂಧಿ ಅವರು ಇನ್‌ಸ್ಟಾಗ್ರಾಮ್‌ಗೆ ಪದಾರ್ಪಣೆ ಮಾಡಿ ತಮ್ಮ ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ. ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಈ ಪುಸ್ತಕ ಖರೀದಿಸಿದ ಅನುಭವವನ್ನು ಹೊಸ ಐಫೋನ್ ಕೊಂಡುಕೊಳ್ಳುವ ಸಂಭ್ರಮಕ್ಕೆ ಹೋಲಿಸಿದ್ದಾರೆ.

ಓದುಗರ ಕುತೂಹಲಕ್ಕೆ ಕಾರಣವೇನು..?

ಸೋನಿಯಾ ಗಾಂಧಿ ಅವರ ಜೀವನದ ಬಗ್ಗೆ ಜನರಿಗೆ ಇಷ್ಟೊಂದು ಕುತೂಹಲ ಮೂಡಲು ಕಾರಣವೇನು ಎಂಬುದನ್ನು ಮಾಧ್ಯಮ ವೃತ್ತಿಪರ ಆಕಾಶ್ ಚಟರ್ಜಿ ವಿಶ್ಲೇಷಿಸಿದ್ದು, ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿ, ಯುಪಿಎ ಆಡಳಿತಾವಧಿಯಲ್ಲಿ ಪ್ರಭಾವಿ ನಾಯಕಿಯಾಗಿ ಹಾಗೂ ನಂತರ ಪಕ್ಷದ ಸೋಲುಗಳನ್ನು ಕಂಡ ಸೋನಿಯಾ ಅವರ ರಾಜಕೀಯ ಪಯಣ ಕುತೂಹಲಕಾರಿಯಾಗಿದೆ. ಅದಕ್ಕಿಂತ ಹೆಚ್ಚಾಗಿ, ವಿದೇಶಿ ಮೂಲದವರು ಎಂಬ ಕಾರಣಕ್ಕೆ ಎದುರಿಸಿದ ತೀವ್ರ ಟೀಕೆ, ಅವಮಾನಗಳನ್ನು ಸಹಿಸಿಕೊಂಡು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನ ನಡುವೆಯೂ ಪುರುಷ ಪ್ರಧಾನ ರಾಷ್ಟ್ರ ರಾಜಕಾರಣದಲ್ಲಿ ಅವರು ಹೇಗೆ ಗಟ್ಟಿಯಾಗಿ ನಿಂತರು ಎಂಬುದನ್ನು ತಿಳಿಯಲು ಓದುಗರು ಉತ್ಸುಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯಕ್ಕಿಂತ ಮಿಗಿಲಾದ ಪ್ರೇಮಕಥೆ

ಆಕಾಂಕ್ಷಾ ಎನ್ನುವವರ ಪ್ರಕಾರ, ಈ ಪುಸ್ತಕದ ನಿಜವಾದ ಆಕರ್ಷಣೆ ಇರುವುದು ರಾಜಕೀಯದ ಆಚೆಗಿನ ವೈಯಕ್ತಿಕ ಕಥೆಯಲ್ಲಿ. ನನ್ನ ಬಗ್ಗೆ ಬಹಳಷ್ಟು ಬರೆಯಲಾಗಿದೆ, ಆದರೆ ಅವರಿಗೆ ತಿಳಿದಿರುವ ನಿಜವಾದ ವ್ಯಕ್ತಿ ಆ ಬರಹಗಳಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ ಎಂದು ಸೋನಿಯಾ ಗಾಂಧಿ ಪುಸ್ತಕದ ಮುನ್ನುಡಿಯಲ್ಲಿ ಬರೆದಿದ್ದಾರೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ರಾಜಕೀಯ ಇತಿಹಾಸದ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿದ್ದರೂ, ರಾಜೀವ್ ಮತ್ತು ಸೋನಿಯಾ ಅವರ ನಡುವಿನ ಸರಳ ಪ್ರೇಮಕಥೆ ಹಾಗೂ ದುರಂತ ಅಂತ್ಯದ ಕುರಿತು ಸ್ವತಃ ಸೋನಿಯಾ ಅವರ ಬಾಯಿಂದಲೇ ಕೇಳುವುದು ಓದುಗರಿಗೆ ಹೊಸ ಅನುಭವ ನೀಡುತ್ತಿದೆ. 2004ರಲ್ಲಿ ಪ್ರಧಾನಿ ಹುದ್ದೆಯನ್ನು ಏಕೆ ನಿರಾಕರಿಸಿದರು ಎಂಬ ರಾಜಕೀಯ ಪ್ರಶ್ನೆಗಿಂತ ಹೆಚ್ಚಾಗಿ, ಅವರ ಬದುಕಿನ ಭಾವನಾತ್ಮಕ ಪಯಣವನ್ನು ತಿಳಿಯಲು ಜನರು ನಿದ್ದೆಗೆಟ್ಟು ಪುಸ್ತಕ ಓದುತ್ತಿದ್ದಾರೆ.

ಹವ್ಯಾಸವೋ ಅಥವಾ ಟ್ರೆಂಡ್..?

ಮತ್ತೊಂದೆಡೆ, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ ಈ ಪುಸ್ತಕದೊಂದಿಗೆ ಸೆಲ್ಫಿ ತೆಗೆದುಕೊಂಡು ಹಂಚಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಫೇಸ್‌ಬುಕ್ ಬಳಕೆದಾರ ರಂಜನ್ ಚೌಧರಿ ಬೇರೆಯದ್ದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿವಾದಗಳು ಮತ್ತು ಪ್ರಚಾರದಿಂದ ಒಂದು ಪುಸ್ತಕ ಸುದ್ದಿಯಾಗಬಹುದು, ಆದರೆ ಅದರಿಂದ ಓದುವ ಸಂಸ್ಕೃತಿ ಬೆಳೆಯುವುದಿಲ್ಲ. ಮುಂದಿನ ತಿಂಗಳೂ ಜನರು ಗ್ರಂಥಾಲಯಕ್ಕೆ ಮರಳುತ್ತಾರೆಯೇ ಅಥವಾ ಹೊಸ ಲೇಖಕರ ಪುಸ್ತಕಗಳನ್ನು ಓದುತ್ತಾರೆಯೇ ಎಂಬುದು ನಿಜವಾದ ಪರೀಕ್ಷೆ ಎಂದು ಬರೆದುಕೊಂಡಿದ್ದಾರೆ.

ಯಾವುದೇ ಕಾರಣವಿರಲಿ ಅಥವಾ ರಾಜಕೀಯ ಕುತೂಹಲವಿರಲಿ, ಭಾವನಾತ್ಮಕ ಕಥೆಯಿರಲಿ ಅಥವಾ ಟ್ರೆಂಡ್‌ನ ಭಾಗವಾಗುವ ಆಸೆಯಿರಲಿ—ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್ ಆತ್ಮಕಥೆಯು ಸದ್ಯಕ್ಕೆ ಅಪರಿಚಿತರ ನಡುವೆಯೂ ಸಂವಾದ ಬೆಸೆಯುವ ಮೂಲಕ ಭಾರತೀಯ ಪುಸ್ತಕ ಲೋಕದಲ್ಲಿ ಹೊಸ ದಾಖಲೆ ಬರೆಯುತ್ತಿದೆ(ಏಜೆನ್ಸೀಸ್​).