ಬಂಗಾಳದ ಫಾಲ್ಟಾದಲ್ಲಿ ಬಿಜೆಪಿಗೆ ಜಯ! ಇಸಿಐ ವಿರುದ್ಧ ಕಿಡಿಕಾರಿದ ಅಭಿಷೇಕ್ ಬ್ಯಾನರ್ಜಿ! ಇದು ಮದವೇರಿದ ಮಾಫಿಯಾದ ಪತನ ಎಂದು ಸಿಎಂ ಸುವೇಂದು ತಿರುಗೇಟು!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಟಿಎಂಸಿ(Suvendu VS Abhishek Banerjee) ನಡುವಿನ ರಾಜಕೀಯ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೇ 21 ರಂದು ನಡೆದಿದ್ದ ಮರುಚುನಾವಣೆಯ ಮತ ಎಣಿಕೆ ಭಾನುವಾರ ನಡೆದಿದ್ದು, ಬಿಜೆಪಿಯ ದೆಬಾಂಗ್ಶು ಪಾಂಡಾ 1 ಲಕ್ಷಕ್ಕೂ ಅಧಿಕ ಮತಗಳ ಬೃಹತ್ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ 294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಬಲ 208ಕ್ಕೆ ಏರಿಕೆಯಾಗಿದೆ.
ಈ ಪಂದ್ಯದಿಂದ ಟಿಎಂಸಿ ಅಭ್ಯರ್ಥಿ ಮೊದಲೇ ಹಿಂದೆ ಸರಿದಿದ್ದರಿಂದ, ಸಿಪಿಐ(ಎಂ) ಅಭ್ಯರ್ಥಿ ಶಂಭು ನಾಥ್ ಕುರ್ಮಿ (40,645 ಮತ) ದ್ವಿತೀಯ ಸ್ಥಾನ ಹಾಗೂ ಕಾಂಗ್ರೆಸ್‌ನ ಅಬ್ದುಲ್ ರಜಾಕ್ ಮೊಲ್ಲಾ (10,084 ಮತ) ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ, ಈ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಗಂಭೀರ ಅಕ್ರಮಗಳ ಆರೋಪ ಹೊರಿಸಿದ್ದಾರೆ.
"ಮತ ಎಣಿಕೆಯ ವೇಗದಲ್ಲೇ ಜಾಲ ಇತ್ತು!": ಚುನಾವಣಾ ಆಯೋಗದ ವಿರುದ್ಧ ಅಭಿಷೇಕ್ ಕಿಡಿ
ಫಲಿತಾಂಶ ಪ್ರಕಟವಾದ ತಕ್ಷಣವೇ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಮೇ 4 ರಂದು ನಡೆದಿದ್ದ ರಾಜ್ಯದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಹಾಗೂ ಇಂದಿನ ಮತ ಎಣಿಕೆಯ ನಡುವಿನ ಕಾಲಾವಧಿಯ ವ್ಯತ್ಯಾಸವನ್ನು ಪ್ರಶ್ನಿಸಿದ್ದಾರೆ. ಮೇ 4 ರಂದು ಮಧ್ಯಾಹ್ನ 3:30 ರವರೆಗೆ ಕೇವಲ 2 ರಿಂದ 4 ರೌಂಡ್‌ಗಳ ಮತ ಎಣಿಕೆ ಮಾತ್ರ ಪೂರ್ಣಗೊಂಡಿತ್ತು. ಆದರೆ, ಇಂದು ಫಾಲ್ಟಾ ಕ್ಷೇತ್ರದಲ್ಲಿ ಅದೇ ಸಮಯಕ್ಕೆ ಎಲ್ಲಾ 21 ರೌಂಡ್‌ಗಳ ಎಣಿಕೆ ಮುಕ್ತಾಯವಾಗಿದೆ. ಈ ಸ್ಪಷ್ಟ ಅಸಂಗತತೆಯ ಬಗ್ಗೆ ದೇಶಕ್ಕೆ ಚುನಾವಣಾ ಆಯೋಗ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಅಭಿಷೇಕ್, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಫಾಲ್ಟಾ ಕ್ಷೇತ್ರದ 1,000ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರು ಪ್ರಾಣಭಯದಿಂದ ಮನೆ ಬಿಟ್ಟು ಓಡಿಹೋಗುವಂತೆ ಮಾಡಲಾಗಿದೆ. ಹಗಲು ಹೊತ್ತಿನಲ್ಲೇ ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿದರೂ ಆಯೋಗ ಕಣ್ಣು ಮುಚ್ಚಿ ಕುಳಿತಿತ್ತು. ಮೇ 4 ರಂದು ಟಿಎಂಸಿ ಕೌಂಟಿಂಗ್ ಏಜೆಂಟರನ್ನೇ ಕೇಂದ್ರ ಪಡೆಗಳು ಹೊರಗಟ್ಟಿದ್ದವು. ಇಡೀ ಪ್ರಕ್ರಿಯೆಯ ಸಿಸಿಟಿವಿ ಆಡಿಟ್ ಆಗದ ಹೊರತು ಈ ಜನಾದೇಶಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಗುಡುಗಿದ್ದಾರೆ.
ಇದು ಮಾಫಿಯಾ ಕಂಪನಿಯ ಅಂತ್ಯದ ಆರಂಭ!: ಸಿಎಂ ಸುವೇಂದು ಕೌಂಟರ್
ಅಭಿಷೇಕ್ ಬ್ಯಾನರ್ಜಿ ಅವರ ಆರೋಪಗಳಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅತ್ಯಂತ ಕಟು ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ. ಟಿಎಂಸಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಸಿಎಂ, ಯಾವುದೇ ತತ್ವ ಮತ್ತು ಸಿದ್ಧಾಂತಗಳಿಲ್ಲದೆ ಕೇವಲ ಒಂದು ಮಾಫಿಯಾ ಕಂಪನಿಯಂತೆ ಬದಲಾಗಿದ್ದ ಪಕ್ಷವೊಂದು ಅಧಿಕಾರ ಕಳೆದುಕೊಂಡ ತಕ್ಷಣ ಅದರ ಅಸ್ಥಿಪಂಜರ ಹೊರಬಿದ್ದಿದೆ. ಈ ಮುಂಚೆ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ಸಿಂಡಿಕೇಟ್ ರಾಜ್ ಮತ್ತು ಬೆದರಿಕೆ ಸಂಸ್ಕೃತಿಯ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದಿದ್ದ ನಾಯಕರು, ಬಂಗಾಳವನ್ನು ತಮ್ಮ ಜಾಗೀರು ಎಂದು ಭಾವಿಸಿದ್ದರು ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಚುನಾವಣೆಯನ್ನು ಪ್ರಹಸನವನ್ನಾಗಿ ಮಾಡಿ ಇದೇ ಫಾಲ್ಟಾ ಕ್ಷೇತ್ರದಲ್ಲಿ ಟಿಎಂಸಿ ಒಂದೂವರೆ ಲಕ್ಷ ಮತಗಳ ಮುನ್ನಡೆ ಸಾಧಿಸಿತ್ತು. ಆದರೆ 15 ವರ್ಷಗಳ ನಂತರ ಇಂದು ಬಂಗಾಳದ ಜನರಿಗೆ ಮುಕ್ತವಾಗಿ ಮತ ಚಲಾಯಿಸುವ ಸ್ವಾತಂತ್ರ್ಯ ಸಿಕ್ಕಾಗ ಅಸಲಿ ಸತ್ಯ ಏನೆಂಬುದು ಜಗತ್ತಿಗೆ ಗೊತ್ತಾಗಿದೆ. ಇದು ಕೇವಲ ತಿರಸ್ಕಾರದ ಆರಂಭವಷ್ಟೇ. ತ್ರಿಪುರಾದಲ್ಲಿ ಟಿಎಂಸಿ ನೋಟಾ ವಿರುದ್ಧ ಸೋತಿದೆ, ಮುಂದಿನ ದಿನಗಳಲ್ಲಿ ಬಂಗಾಳದಲ್ಲೂ ಅದೇ ಗತಿ ಬರಲಿದೆ ಎಂದು ಸುವೇಂದು ಭವಿಷ್ಯ ನುಡಿದಿದ್ದಾರೆ.
ಫಾಲ್ಟಾ ಮರುಚುನಾವಣೆಯ ಹಿನ್ನೆಲೆ ಏನು?
ಏಪ್ರಿಲ್ 29 ರಂದು ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ಕ್ಷೇತ್ರದ ಎಲ್ಲಾ 285 ಬೂತ್‌ಗಳಲ್ಲಿ ನಡೆದಿದ್ದ ಮತದಾನದ ವೇಳೆ ಭಾರಿ ಪ್ರಮಾಣದ ಇವಿಎಂ ಹ್ಯಾಕಿಂಗ್ ಮತ್ತು ಅಕ್ರಮಗಳ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಡೀ ಚುನಾವಣೆಯನ್ನೇ ರದ್ದುಗೊಳಿಸಿದ್ದ ಚುನಾವಣಾ ಆಯೋಗ, ಮೇ 21 ರಂದು ಭಾರಿ ಬಿಗಿ ಭದ್ರತೆಯ ನಡುವೆ ಮರುಚುನಾವಣೆ ನಡೆಸಿತ್ತು. ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಬರೋಬ್ಬರಿ 35 ಕಂಪನಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಒಟ್ಟು 2.36 ಲಕ್ಷ ಮತದಾರರ ಪೈಕಿ ಶೇ. 87 ಕ್ಕೂ ಹೆಚ್ಚು ಜನರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ದಕ್ಷಿಣ 24 ಪರಗಣ ಜಿಲ್ಲೆಯಲ್ಲೇ ಬಿಜೆಪಿ ಈ ಮಟ್ಟದ ಐತಿಹಾಸಿಕ ಜಯ ಸಾಧಿಸಿರುವುದು, ನೂತನ ಸುವೇಂದು ಅಧಿಕಾರಿ ಸರ್ಕಾರದ ಜನಪ್ರಿಯತೆ ಹೆಚ್ಚುತ್ತಿರುವುದರ ಮುನ್ಸೂಚನೆಯಾಗಿದ್ದು, ಟಿಎಂಸಿಯ ಭವಿಷ್ಯದ ಅಸ್ತಿತ್ವಕ್ಕೆ ದೊಡ್ಡ ಆತಂಕ ಸೃಷ್ಟಿಸಿದೆ,(ಏಜೆನ್ಸೀಸ್).