ಜೈಪುರ: ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಒಂದು ವೇಳೆ ಯುದ್ಧ ನಡೆದರೆ, ಭಾರತ ಪಾಕಿಸ್ತಾನದ ಪರ ನಿಲ್ಲುತ್ತದೆ ಎಂದು ಗುರುವಾರ(ಅ. 15) ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಹೇಳಿದ್ದು, ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಮದನ್ ರಾಥೋಡ್, ನಾವೆಲ್ಲರೂ ಒಂದು ಅರ್ಥಮಾಡಿಕೊಳ್ಳಬೇಕು. ನೋಡಿ ಭಾರತದ ವಿಷಯಕ್ಕೆ ಬಂದಾಗ, ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಒಂದು ವೇಳೆ ಯುದ್ಧ ನಡೆದರೆ, ನಾವು ಪಾಕಿಸ್ತಾನದ ಪರವಾಗಿರುತ್ತೇವೆ. ಯಾಕಂದ್ರೆ ಅದು ನಮ್ಮ ನೆರೆಯ ದೇಶ. ಆದರೆ ನಮ್ಮ ನಡುವಿನ ಸಮಸ್ಯೆ ಬಂದ್ರೆ, ನಾವು ನಮ್ಮ ಭಾರತದ ಪರವಾಗಿ ನಿಲ್ಲುತ್ತೇವೆ. ಹೌದಲ್ಲವೇ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮದನ್ ರಾಥೋಡ್ ಹೇಳಿಕೆಯೂ ಕಾಂಗ್ರೆಸ್ ನಾಯಕರು ಮತ್ತು ಇತರ ರಾಜಕೀಯ ವ್ಯಕ್ತಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಪಾಕಿಸ್ತಾನದ ಬಗೆಗಿನ ಬಿಜೆಪಿ ನಿಲುವನ್ನು ಪ್ರಶ್ನೆ ಮಾಡಿದ್ದಾರೆ.
ಎಕ್ಸ್ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಮಾ ಮುಹಮ್ಮದ್, ನಮ್ಮ ಸೈನಿಕರು ಮತ್ತು ನಮ್ಮ ಜನರನ್ನು ಕೊಲ್ಲುವ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಬಗ್ಗೆ ಬಿಜೆಪಿಯ ಪ್ರೀತಿ ಮತ್ತೊಮ್ಮೆ ಬಹಿರಂಗವಾಗಿದೆ. ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಯುದ್ಧಕ್ಕೆ ನಡೆದ್ರೆ ತಾವು ಪಾಕಿಸ್ತಾನ ಪರವಾಗಿರುತ್ತಾರೆ ಎಂದು ರಾಜಸ್ಥಾನದ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೂಡ ಪಾಕಿಸ್ತಾನದ ಜೊತೆಗಿದ್ದಾರೆಯೇ? ಇಲ್ಲದಿದ್ದರೆ, ಈ ರಾಷ್ಟ್ರವಿರೋಧಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಮಗೆ ತಿಳಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸಂದೀಪ್ ಗುಪ್ತಾ, ರಾಥೋಡ್ ಅವರ ಹೇಳಿಕೆಗಳು ಪಾಕಿಸ್ತಾನದ ಬಗ್ಗೆ ಬಿಜೆಪಿಯ ಪ್ರೀತಿ ಬಹಿರಂಗಪಡಿಸಿವೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನಾವು ಪಾಕಿಸ್ತಾನದೊಂದಿಗಿದ್ದೇವೆ ಎಂದು ಹೇಳುತ್ತಾರೆ. ಮತ್ತೊಮ್ಮೆ, ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಮೇಲಿನ ಬಿಜೆಪಿಯ ಪ್ರೀತಿ ಬಹಿರಂಗವಾಗಿ ಹೊರಬಂದಿದೆ. ಬಿಜೆಪಿ ಪಾಕಿಸ್ತಾನವನ್ನು ಪ್ರೀತಿಸುತ್ತದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).