ನವದೆಹಲಿ: 'ಫ್ಲೈದುಬೈ'ನ ವಿಮಾನ ಹಾರಾಟದ ವೇಳೆ ಕೋ-ಪೈಲಟ್ನ ಪಿತೂರಿಯ ಭೀಕರ ದಾಳಿಗೆ ಎದೆಗುಂದದೆ, 180 ಮಂದಿಯ ಜೀವ ಉಳಿಸುವ ಮೂಲಕ ಸಾಹಸ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಅಭಿನಂದಿಸದೇ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮೌನವಾಗಿರುವ ಬಗ್ಗೆ ಬಿಜೆಪಿ ಪ್ರಶ್ನಿಸಿದ್ದು, ದಾಳಿಕೋರನ ಧರ್ಮದ ಕಾರಣವೇ ಎಂದು ಕೇಳಿದೆ.
ಈ ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಇಂದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅಪಾರ ಧೈರ್ಯವನ್ನು ಪ್ರದರ್ಶಿಸಿದ್ದಾರೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಅವರ ಬಗ್ಗೆ ಹೆಮ್ಮೆ ಇದೆ. ನರೇಂದ್ರ ಮೋದಿ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಮಾತನಾಡಿ, ಅವರ ಅಸಾಧಾರಣ ಧೈರ್ಯವನ್ನು ಶ್ಲಾಘಿಸಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ಕಾಂಗ್ರೆಸ್ನ ಮೌನವನ್ನು ಪ್ರಶ್ನಿಸಿದ ಅವರು, ಇಡೀ ದೇಶವೇ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಬಗ್ಗೆ ಹೆಮ್ಮೆಪಡುತ್ತಿರುವಾಗ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯಾಕೆ ಅವರ ಗೌರವಾರ್ಥವಾಗಿ ಯಾವುದೇ ಹೇಳಿಕೆ ನೀಡಲಿಲ್ಲ ಅಥವಾ ಪೋಸ್ಟ್ ಮಾಡಲಿಲ್ಲ? ಸೋನಿಯಾ ಗಾಂಧಿ ಕೂಡ ಮೌನ ವಹಿಸಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮೌನವಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಕಲಿ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷವು, ಮತ್ತೊಮ್ಮೆ ಓಲೈಕೆ ರಾಜಕೀಯದಲ್ಲಿ ತೊಡಗಿದ್ದು, ಭಯೋತ್ಪಾದಕರ ಧರ್ಮವನ್ನು ನೋಡುತ್ತಿದೆಯೇ? ಅದಕ್ಕಾಗಿಯೇ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವುದು ಅಥವಾ ಅವರ ಧೈರ್ಯವನ್ನು ಹೊಗಳುವುದು ಅಗತ್ಯವೆಂದು ಪರಿಗಣಿಸಲಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಈ ಭದ್ರತಾ ಬಿಕ್ಕಟ್ಟು ಸಂಭವಿಸಿತ್ತು. ಒಮಾನ್ ಮೂಲದ ಸಹ-ಪೈಲಟ್ ವಿಮಾನವನ್ನು ಕೆಳಗೆ ತರುವ ಉದ್ದೇಶದಿಂದ ಕಮಾಂಡರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದರಿಂದ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸರಿಸುಮಾರು 16,000 ಅಡಿಗಳಷ್ಟು ಕೆಳಗೆ ಧುಮುಕಿತ್ತು. ತೀವ್ರ ಗಾಯಗಳಾಗಿದ್ದರೂ ಮಚ್ಚಾರ್ ದಾಳಿಕೋರನನ್ನು ಪ್ರತಿರೋಧಿಸಿದರು. ತಕ್ಷಣ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಿದರು. ಬಳಿಕ ಕರ್ತವ್ಯದಲ್ಲಿಲ್ಲದ ಇಬ್ಬರು ವಾಯುಯಾನ ತಜ್ಞರ ಸಹಾಯದಿಂದ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಇದರಿಂದ ವಿಮಾನದಲ್ಲಿದ್ದ ಎಲ್ಲಾ 180 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದರು.
ಈ ಘಟನೆಯ ಕುರಿತು ಅಂತರರಾಷ್ಟ್ರೀಯ ತನಿಖೆ ಮುಂದುವರಿದಿದ್ದು, ದಾಳಿಕೋರನನ್ನು ಯುಎಇಗೆ ಕರೆತರಲಾಗಿದೆ. ಈ ದಾಳಿಯ ಹಿಂದೆ ಹೊರಗಿನವರ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚಲು ಇಸ್ರೇಲಿ ತನಿಖಾ ಸಿಬ್ಬಂದಿಯನ್ನು ಸಹ ಯುಎಇಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ (ಏಜೆನ್ಸೀಸ್).