ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ (West Bengal Politics) ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣಾ ಫಲಿತಾಂಶದ ಬೆನ್ನಲ್ಲೇ, ಕಳೆದ 15 ವರ್ಷಗಳಿಂದ ರಾಜ್ಯವನ್ನು ಆಳಿದ್ದ ತೃಣಮೂಲ ಕಾಂಗ್ರೆಸ್ (TMC) ಮತ್ತು ಅದರ ನಾಯಕಿ ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆಯಾಗಿದೆ. ಮೇ 4ರ ಚುನಾವಣಾ ಮುಖಭಂಗದ ನಂತರ ಪಕ್ಷವು ಪತನದ ಹಾದಿ ಹಿಡಿದಿರುವುದು ರಾಜಕೀಯ ವಿಶ್ಲೇಷಕರನ್ನು ಬೆರಗುಗೊಳಿಸಿದೆ.
ಚುನಾವಣಾ ಸೋಲಿಗೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೇ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಹಲವು ವಕ್ತಾರರನ್ನು ಪಕ್ಷದಿಂದ ವಜಾಗೊಳಿಸಿದ ಬೆನ್ನಲ್ಲೇ ಈ ಆಂತರಿಕ ಕಸರತ್ತು ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಟಿಎಂಸಿ ಪಾಳಯದಲ್ಲಿ ಭಿನ್ನಮತದ ಹೊಗೆ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ.
ಮಹಾರಾಷ್ಟ್ರ ಮಾಡೆಲ್ ಬಂಡಾಯ!
ಪ್ರಸ್ತುತ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ಎದ್ದಿರುವ ಬಂಡಾಯವು ಮಮತಾ ಬ್ಯಾನರ್ಜಿ ನೇತೃತ್ವಕ್ಕೆ ನೇರ ಸವಾಲು ಹಾಕಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಚಾರದಲ್ಲಿ ಪಕ್ಷವು ಈಗ ಇಬ್ಬಾಗವಾಗಿದೆ. ಮಮತಾ ಬ್ಯಾನರ್ಜಿ ಅವರು ಶೋಭನ್‌ದೇವ್ ಚಟ್ಟೋಪಾಧ್ಯಾಯರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರೆ, ಪಕ್ಷದ ಒಟ್ಟು 80 ಶಾಸಕರ ಪೈಕಿ ದೊಡ್ಡದೊಂದು ಗುಂಪು ಉಚ್ಚಾಟಿತ ನಾಯಕ ರಿತಬ್ರತಾ ಬ್ಯಾನರ್ಜಿಯನ್ನು ಬೆಂಬಲಿಸಿ ನಿಂತಿದೆ.
ಉಚ್ಚಾಟಿತ ನಾಯಕ ರಿಜು ದತ್ತಾ ಪ್ರಕಾರ, ಮಹಾರಾಷ್ಟ್ರದ ಶಿವಸೇನೆಯ ಹಾದಿಯಲ್ಲೇ ಈ ಬಂಡಾಯ ಬಣವು ತಾವೇ ಅಸಲಿ ತೃಣಮೂಲ ಎಂದು ಹೇಳಿಕೊಳ್ಳುವ ಸಾಧ್ಯತೆಯಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ಅಧಿಕೃತ ಚಿಹ್ನೆಗಾಗಿ ದೀದಿ ಮತ್ತು ಸೋದರಳಿಯನ ವಿರುದ್ಧ ದೊಡ್ಡ ಕಾನೂನು ಸಮರಕ್ಕೆ ದಾರಿ ಮಾಡಿಕೊಡಬಹುದು. ಇತ್ತೀಚೆಗೆ ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಪ್ರಮುಖ ಸಭೆಗೆ ಸುಮಾರು 60ಕ್ಕೂ ಹೆಚ್ಚು ಶಾಸಕರು ಗೈರುಹಾಜರಾಗಿರುವುದು ಪಕ್ಷದೊಳಗಿನ ಅಸಮಾಧಾನ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಟಿಎಂಸಿ ಆಂತರಿಕ ಯುದ್ಧದಿಂದ ಬಿಜೆಪಿಗೇನು ಲಾಭ..?
ಚುನಾವಣಾ ವಿಜಯದ ಬಳಿಕ ಬಿಜೆಪಿ ತನ್ನ ಬಾಗಿಲುಗಳನ್ನು ಟಿಎಂಸಿ ನಾಯಕರಿಗಾಗಿ ಮುಚ್ಚಿದೆ ಎಂದು ಸ್ಪಷ್ಟಪಡಿಸಿದೆ. ಟಿಎಂಸಿಯ ಅತೃಪ್ತ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು ತನ್ನ ಮೂಲ ಸಿದ್ಧಾಂತವನ್ನು ಹಾಳುಮಾಡಿಕೊಳ್ಳಲು ಬಿಜೆಪಿ ಇಷ್ಟಪಡುತ್ತಿಲ್ಲ. ಬದಲಿಗೆ, ಟಿಎಂಸಿಯನ್ನು ಸಂಪೂರ್ಣವಾಗಿ ನಾಶಪಡಿಸುವ ಬದಲು, ಅದನ್ನು ಆಂತರಿಕವಾಗಿ ವಿಭಜಿಸಿ ತೀರಾ ದುರ್ಬಲಗೊಳಿಸುವುದು ಸದ್ಯ ಬಿಜೆಪಿಯ ತಂತ್ರಗಾರಿಕೆಯಂತೆ ಕಾಣುತ್ತಿದೆ.
ಮಮತಾ ಬ್ಯಾನರ್ಜಿ ಪ್ರಬಲ ವಿರೋಧ ಪಕ್ಷದ ನಾಯಕಿಯಾಗಿ ಮತ್ತೆ ಪುಟೇಳುವುದನ್ನು ತಡೆಯಲು, ಹೊಸ ನಾಯಕತ್ವದ ಅಡಿಯಲ್ಲಿ ದುರ್ಬಲಗೊಂಡ ಟಿಎಂಸಿ ಇರುವುದೇ ಬಿಜೆಪಿಗೆ ರಾಜಕೀಯವಾಗಿ ಹೆಚ್ಚು ಅನುಕೂಲಕರವಾಗಿದೆ. ಭಿನ್ನಮತೀಯರಿಗೆ ಆಶ್ರಯ ನೀಡಿದರೆ ಮಮತಾ ಬ್ಯಾನರ್ಜಿ ಮೇಲಿನ ಸಾರ್ವಜನಿಕ ಸಹಾನುಭೂತಿ ಹೆಚ್ಚಾಗಬಹುದು ಎಂಬ ಕಾರಣಕ್ಕೆ, ಪಕ್ಷದೊಳಗಿನ ಬಂಡಾಯ ತನ್ನಷ್ಟಕ್ಕೆ ತಾನೇ ಬೆಳೆಯಲಿ ಎಂಬುದು ಕೇಸರಿ ಪಡೆಯ ಆಲೋಚನೆಯಾಗಿದೆ.
ವಿರೋಧ ಪಕ್ಷದ ಸ್ಥಾನಕ್ಕಾಗಿ ಜಿದ್ದಾಜಿದ್ದಿ
ಟಿಎಂಸಿ ಪಕ್ಷವು ದುರ್ಬಲಗೊಂಡಷ್ಟೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಪುನಶ್ಚೇತನದ ಆಸೆಗಳು ಜೀವಪಡೆಯುತ್ತಿವೆ. ಟಿಎಂಸಿಯ ಈ ದೊಡ್ಡ ಸೋಲಿನಲ್ಲಿ ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯುವ ಮುನ್ಸೂಚನೆ ಕಾಣುತ್ತಿದ್ದು, ಮಮತಾ ಬ್ಯಾನರ್ಜಿ ಅವರಿಂದ ಬೇಸತ್ತ ನಾಯಕರು ಮತ್ತೆ ಕಾಂಗ್ರೆಸ್ ಸಾರಥ್ಯ ವಹಿಸಬಹುದು ಎಂಬ ನಿರೀಕ್ಷೆಯಲ್ಲಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಬಲಗೊಳ್ಳುವುದನ್ನು ಇಷ್ಟಪಡದ ಬಿಜೆಪಿ, ತೃಣಮೂಲ ಕಾಂಗ್ರೆಸ್ ಕೇವಲ ಹೆಸರಿಗಷ್ಟೇ ಪ್ರಮುಖ ವಿರೋಧ ಪಕ್ಷವಾಗಿ ಉಳಿಯಲಿ ಎಂದು ಬಯಸುತ್ತಿದೆ. ಮಮತಾ ಬ್ಯಾನರ್ಜಿ ಪಕ್ಷವನ್ನು ಆಂತರಿಕವಾಗಿ ಹಿಡಿದಿಟ್ಟುಕೊಳ್ಳಲು ವಿಫಲರಾದರೆ ಅವರ ರಾಜಕೀಯ ಮೌಲ್ಯ ಕುಸಿಯಲಿದ್ದು, ಇದು ರಾಷ್ಟ್ರಮಟ್ಟದ ಇಂಡಿಯಾ (INDIA) ಮೈತ್ರಿಕೂಟದ ಮೇಲೂ ನಕರಾತ್ಮಕ ಪರಿಣಾಮ ಬೀರಲಿದೆ.
ದೀದಿಗೆ ಸದ್ಯ ದೂರವಾಯ್ತು ದೆಹಲಿ ಕನಸು!
ಯಾವಾಗಲೂ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸಲು ಬಯಸುತ್ತಿದ್ದ ಮಮತಾ ಬ್ಯಾನರ್ಜಿ, ಬಂಗಾಳದ ಸೋಲಿನ ನಂತರ ದೆಹಲಿಗೆ ತಮ್ಮ ರಾಜಕೀಯ ಕೇಂದ್ರವನ್ನು ಬದಲಾಯಿಸುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ. ಆದರೆ ಪ್ರಸ್ತುತ ಸ್ವಂತ ಪಕ್ಷದಲ್ಲೇ ಎದುರಾಗಿರುವ ಈ ಬಿಕ್ಕಟ್ಟು ಅವರನ್ನು ಕೋಲ್ಕತ್ತಾದಲ್ಲೇ ಉಳಿಯುವಂತೆ ಮಾಡಿದೆ. ದೆಹಲಿಯಲ್ಲಿ ತಮಗೆ ಸವಾಲಾಗುವ ಬದಲು ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಬಿಕ್ಕಟ್ಟು ನಿವಾರಣೆಯಲ್ಲೇ ಬ್ಯುಸಿಯಾಗಿರಲಿ ಎಂಬುದು ಬಿಜೆಪಿಯ ಆಶಯವಾಗಿದೆ. ಒಟ್ಟಿನಲ್ಲಿ, ದೀದಿ ದೆಹಲಿ ರನ್ ಸದ್ಯಕ್ಕೆ ಮುಂದೂಡಲ್ಪಟ್ಟಿದ್ದು, ಬಂಗಾಳದ ಗದ್ದುಗೆಯನ್ನು ಉಳಿಸಿಕೊಳ್ಳುವ ದೊಡ್ಡ ಅಗ್ನಿಪರೀಕ್ಷೆ ಅವರ ಮುಂದಿದೆ(ಏಜೆನ್ಸೀಸ್).