Buddhi Shuddhi Yagna 
ದೇಶ

ಶಾಂತವಾಗುತ್ತಿಲ್ಲ 'ಶುದ್ಧೀಕರಣ' ಕಿಚ್ಚು: ರಾಹುಲ್‌ ಗಾಂಧಿಗೆ ಸನ್ಮತಿ ಬರಲಿ ಅಂತ ಬುದ್ಧಿ ಶುದ್ಧಿ ಯಜ್ಞ ಮಾಡಿದ ಬಿಜೆಪಿ ನಾಯಕರು! | Buddhi Shuddhi Yagna

ಡೆಹ್ರಾಡೂನ್: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶ ನಡೆಸಿದ್ದ ಮೈದಾನದಲ್ಲಿ ನಡೆದಿದೆ ಎನ್ನಲಾದ ಶುದ್ಧೀಕರಣ ಪೂಜೆಯ ರಾಜಕೀಯ ಕಾಳಗ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಈ ವಿವಾದದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಬುದ್ಧಿ ಶುದ್ಧಿ ಯಜ್ಞ (Buddhi Shuddhi Yagna) ನಡೆಸಿದ್ದಾರೆ.
ಡೆಹ್ರಾಡೂನ್‌ನ ದೇವಾಲಯವೊಂದರಲ್ಲಿ ಬಿಜೆಪಿ ಎಸ್​ಸಿ ಮೋರ್ಚಾ ವತಿಯಿಂದ ಈ ಯಜ್ಞವನ್ನು ಆಯೋಜಿಸಲಾಗಿತ್ತು. ಯಜ್ಞದ ವೇಳೆ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದ ಬಿಜೆಪಿ ನಾಯಕರು, ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರಿಗೆ ಸನ್ಮತಿ ಬರಲಿ ಮತ್ತು ಅವರು ಸುಳ್ಳು ಪ್ರಚಾರ ಮಾಡುವುದನ್ನು ತಡೆಯಲಿ ಎಂಬ ಉದ್ದೇಶದಿಂದ ಈ ಪೂಜೆ ನಡೆಸಲಾಗಿದೆ ಎಂದರು. ಇನ್ನೊಂದೆಡೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಉತ್ತರಾಖಂಡ ಸಚಿವ ಭಗವತ್ ಮಕ್ವಾನಾ, ರಾಹುಲ್ ಗಾಂಧಿ ಅವರು ಪ್ರತಿಪಕ್ಷದ ನಾಯಕರಾಗಿದ್ದು ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದಾರೆ. ಆದರೆ ದೇಶದಲ್ಲಿ ಸಚಿವರೇ ಅಪರಾಧ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಮತ್ತೊಂದೆಡೆ, ಹಲ್ದ್ವಾನಿ ಶುದ್ಧೀಕರಣ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಉತ್ತರಾಖಂಡದಾದ್ಯಂತ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಶುದ್ಧೀಕರಣ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧವೇ ದಾಖಲಾಗಿರುವ ಎಫ್‌ಐಆರ್ ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಉತ್ತರಾಖಂಡ ಸಚಿವಾಲಯದ ಹೊರಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಏನಿದು ಶುದ್ಧೀಕರಣ ವಿವಾದ...?

ಆಗಸ್ಟ್ 11 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಶುದ್ಧೀಕರಣ ಯಜ್ಞ ನಡೆದಿದ್ದು, ಇದಕ್ಕಿಂತ ಮೂರು ದಿನಗಳ ಮೊದಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಖರ್ಗೆ ಅವರ ದಲಿತರೆಂಬ ಕಾರಣಕ್ಕೆ ಈ ಶುದ್ಧೀಕರಣ ನಡೆಸಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್, ಬಿಜೆಪಿಯು ದಲಿತ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ ಎಂದು ವಾಗ್ದಾಳಿ ನಡೆಸಿತ್ತು.
ಆದರೆ ಬಿಜೆಪಿ ಈ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದೆ. ತಮ್ಮ ಪಕ್ಷದ ಯಾವುದೇ ಪದಾಧಿಕಾರಿಗಳು ಈ ಪೂಜೆ ನಡೆಸಿಲ್ಲ, ಕಾಂಗ್ರೆಸ್ ಕಾರ್ಯಕ್ರಮ ಮುಗಿದ ನಂತರ ಮೈದಾನದಲ್ಲಿ ಕಸ ಬಿದ್ದಿದ್ದರಿಂದ ಅದನ್ನು ಸ್ವಚ್ಛಗೊಳಿಸಿ ಹವನ ನಡೆಸಲಾಗಿತ್ತು ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಈ ಸ್ವಚ್ಛತಾ ಕಾರ್ಯಕ್ರಮ ಮತ್ತು ಪೂಜೆಯಲ್ಲಿ ವಾಲ್ಮೀಕಿ ಸಮುದಾಯದ ಜನರು ಭಾಗವಹಿಸಿದ್ದು, ಇದಕ್ಕೂ ಖರ್ಗೆ ಅವರ ಜಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

ರಾಹುಲ್​ ಗಾಂಧಿ ವಿರುದ್ಧ ಎಫ್​ಐಆರ್!

ಈ ಘಟನೆಯ ಕುರಿತು ಆಗಸ್ಟ್ 29 ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ರಾಹುಲ್ ಗಾಂಧಿ, ಹಲ್ದ್ವಾನಿಯ ಶುದ್ಧೀಕರಣ ಘಟನೆಯು ಅಸ್ಪೃಶ್ಯತೆಯ ಆಚರಣೆಯಾಗಿದೆ. ಅಲ್ಲದೆ ಬಿಜೆಪಿ-ಆರ್​ಎಸ್ಎಸ್​ ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿದೆ ಎಂದು ಆರೋಪಿಸಿ, ಈ ಕೃತ್ಯದ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ತಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯ ವಿರುದ್ಧ ವಾಲ್ಮೀಕಿ ಸಮುದಾಯದ ನಾಯಕ ಹಾಗೂ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸದ ಪದಾಧಿಕಾರಿ ಅಮಿತ್ ಕುಮಾರ್ ಎಂಬುವರು ದೂರು ನೀಡಿದ್ದು, ಅದರನ್ವಯ ಕಾಂಗ್ರೆಸ್​ ನಾಯಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆಯು ಧಾರ್ಮಿಕ ಪೂಜೆಗೆ ಜಾತೀಯ ಬಣ್ಣ ಬಳಿದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಮಿತ್ ಕುಮಾರ್ ಆರೋಪಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 (ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕುವುದು), 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಪ್ರತಿಮಾ ಸಿಂಗ್ ಮಾತನಾಡಿ, ಆಗಸ್ಟ್ 9 ರಿಂದಲೇ ಹಲ್ದ್ವಾನಿ ಶುದ್ಧೀಕರಣದ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದರೂ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸಿಲ್ಲ. ಈಗ ಎಲ್ಲಾ ಜಿಲ್ಲೆಗಳಲ್ಲಿ ದೂರು ನೀಡಲಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಹೈಕಮಾಂಡ್​ನ ಹಿರಿಯ ನಾಯಕರನ್ನು ಒಳಗೊಂಡು ರಾಜ್ಯಾದ್ಯಂತ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿಯ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಬಲಬೀರ್ ಘುನಿಯಾಲ್ ಮಾತನಾಡಿ, ಉತ್ತರಾಖಂಡದ ಜನರಿಗೆ ಖರ್ಗೆ ಅವರ ಜಾತಿಯೇ ತಿಳಿದಿಲ್ಲ, ಆದರೂ ರಾಹುಲ್ ಗಾಂಧಿ ಈ ವಿಚಾರಕ್ಕೆ ಜಾತೀಯ ಬಣ್ಣ ಬಳಿದು ಸಾಮಾಜಿಕ ಸೌಹಾರ್ದತೆ ಕದಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ರಾಜ್ಯಾದ್ಯಂತ ಸರಣಿ ಪ್ರತಿಭಟನೆ ನಡೆಸಿ ಅವರ ಪೋಸ್ಟರ್ ಹಾಗೂ ಪತ್ರಿಕೆಗಳನ್ನು ದಹಿಸುವುದಾಗಿ ತಿಳಿಸಿರುವ ಬಿಜೆಪಿ, ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಧರಣಿ ನಡೆಸಿ ಆಕ್ರೋಶ ಹೊರಹಾಕಿದೆ(ಏಜೆನ್ಸೀಸ್​).