Mehsana Corporation | ನಾಯಕರಿಗೆ ಚಹಾ ನೀಡುತ್ತಿದ್ದ ರಮೇಶ್‌ಭಾಯ್ ಈಗ ಮೆಹ್ಸಾನಾ ಕಾರ್ಪೊರೇಟರ್! 
ದೇಶ

ಬಿಜೆಪಿ ಕಚೇರಿಯ ಜವಾನನಿಗೆ ಒಲಿದ ಅದೃಷ್ಟ; ನಾಯಕರಿಗೆ ಚಹಾ ನೀಡುತ್ತಿದ್ದ ರಮೇಶ್‌ಭಾಯ್ ಈಗ ಮೆಹ್ಸಾನಾ ಕಾರ್ಪೊರೇಟರ್! | Mehsana Corporation

Mehsana Corporation: ಬಿಜೆಪಿ ಕಚೇರಿಯ ಸಭಾಂಗಣಗಳಿಂದ ಅಧಿಕಾರದ ಕಾರಿಡಾರ್‌ಗಳವರೆಗೆ, ರಮೇಶ್‌ಭಾಯ್ ಭಿಲ್ ಜೀವನದ ಪಯಣ ಮೆಹ್ಸಾನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಹೃದಯಸ್ಪರ್ಶಿ ಸುದ್ದಿಯಾಗಿ ಹೊರಹೊಮ್ಮಿದ್ದು, ವಾರ್ಡ್ ಸಂಖ್ಯೆ 13ರಲ್ಲಿ ಕೇಸರಿ ಪಕ್ಷ ಭರ್ಜರಿ ಜಯ ಸಾಧಿಸಿದೆ. ಆದರೆ, ಈ ವಿಜಯದ ನಡುವೆ ಬಿಜೆಪಿಯ ಜಿಲ್ಲಾ ಕಚೇರಿ ಕಮಲಂನಲ್ಲಿ ಜವಾನರಾಗಿ (ಪಿಯೂನ್) ಕೆಲಸ ಮಾಡುತ್ತಿದ್ದ ರಮೇಶ್‌ಭಾಯ್ ಗೆಲುವು ದೇಶ್ಯಾದ್ಯಂತ ಸದ್ದು ಮಾಡಿದೆ.
ಪಕ್ಷದ ನಾಯಕರಿಗೆ ಚಹಾ ನೀಡುವುದು ಮತ್ತು ಕಚೇರಿಯ ಫೈಲ್‌ಗಳನ್ನು ನಿರ್ವಹಿಸುವ ಕೆಲಸದಿಂದ ಚುನಾಯಿತ ಕಾರ್ಪೊರೇಟರ್ ಆಗುವವರೆಗಿನ ಇವರ ಈ ಅದ್ಭುತ ಪರಿವರ್ತನೆಯ ಪಯಣ ಉತ್ತರ ಗುಜರಾತ್‌ನ ತಳಮಟ್ಟದ ರಾಜಕೀಯ ಶಕ್ತಿಯ ಸಂಕೇತವಾಗಿದೆ. ರಮೇಶ್‌ಭಾಯ್ ಭಿಲ್ ಕಳೆದ 28 ವರ್ಷಗಳಿಂದ ಮೆಹ್ಸಾನಾ ಬಿಜೆಪಿ ಕಚೇರಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದ್ದು, ಅಲ್ಲಿನ ಕಾರ್ಯಕರ್ತರೊಂದಿಗೆ ಬಲವಾದ ಒಡನಾಟ ಹೊಂದಿದ್ದಾರೆ. ಇವರ ನಿಷ್ಠೆ ಮತ್ತು ನಾಯಕತ್ವ ಗುಣವನ್ನು ಗುರುತಿಸಿದ ಪಕ್ಷವು, ವಾರ್ಡ್ ಸಂಖ್ಯೆ 13 ರಿಂದ ಇವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು.
ಈ ಚುನಾವಣೆಯಲ್ಲಿ 4,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ ರಮೇಶ್‌ಭಾಯ್ ಭಿಲ್, ತಮ್ಮ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ, ಇಡೀ ಸಮಿತಿಯೇ ವಿಜಯಶಾಲಿಯಾಗಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಅಭಿವೃದ್ಧಿಯೇ ನನ್ನ ಮುಂದಿನ ಗುರಿ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ನಾನು ಕೆಲಸ ಮಾಡುತ್ತೇನೆ. ಕಳೆದ 28 ವರ್ಷಗಳಿಂದ ಪಿಯೂನ್ ಆಗಿ ನಾನು ಮಾಡಿದ ಸೇವೆಗೆ ಇಂದು ಗೌರವ ಸಿಕ್ಕಿದೆ ಎಂದರು(ಏಜೆನ್ಸೀಸ್​).