Tushar Apte | ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ತುಷಾರ್ ಆಪ್ಟೆ
ಮುಂಬೈ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕುಲ್ಗಾಂವ್-ಬದ್ಲಾಪುರ ಪುರಸಭೆಯ ಕಾರ್ಪೊರೇಟರ್ ಆಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಮನಿರ್ದೇಶನ ಮಾಡಿದ ಬಳಿಕ ಮಹಾರಾಷ್ಟ್ರದಲ್ಲಿ ವಿವಾದ ಬುಗಿಲೆದ್ದಿದ್ದು, ಇದು ಸಾರ್ವಜನಿಕ ಆಕ್ರೋಶ ಮತ್ತು ತೀವ್ರ ರಾಜಕೀಯ ಟೀಕೆಗೆ ಆಹಾರವಾಗಿದೆ.
ನಾಲ್ವರು ನಾಮನಿರ್ದೇಶಿತ ಕಾರ್ಪೊರೇಟರ್‌ಗಳ ಹೆಸರುಗಳೊಂದಿಗೆ ಆಪ್ಟೆ ನಾಮನಿರ್ದೇಶನವನ್ನು ಸಹ ಘೋಷಿಸಲಾಗಿದ್ದು, ಈ ಕ್ರಮವು ತಕ್ಷಣದ ವಿರೋಧಕ್ಕೆ ಕಾರಣವಾಗಿದೆ. ಪೋಕ್ಸೋ ಕೇಸ್ನಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸುವ ಔಚಿತ್ಯವೇನಿತ್ತು ಎಂದು ಅನೇಕರು ಪ್ರಶ್ನಿಸಿದ್ದಾರೆ.
ಏನಿದು ವಿವಾದ..?
2024 ರ ಆಗಸ್ಟ್ನಲ್ಲಿ ಬದ್ಲಾಪುರದ ಪ್ರಸಿದ್ಧ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಲ್ಲಿ ಅಕ್ಷಯ್ ಶಿಂಧೆ ಎಂಬಾತನನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಆತ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ. ಶಾಲೆಯ ಅಧ್ಯಕ್ಷ ಉದಯ್ ಕೊತ್ವಾಲ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಆಪ್ಟೆಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ.
ಪ್ರಕರಣ ದಾಖಲಾದ ಬಳಿಕ ಕೊತ್ವಾಲ್ ಮತ್ತು ಆಪ್ಟೆ ಇಬ್ಬರೂ ತಲೆಮರೆಸಿಕೊಂಡಿದ್ದು, ಸುಮಾರು 40 ದಿನಗಳ ನಂತರ ಥಾಣೆ ಅಪರಾಧ ವಿಭಾಗವು ಕರ್ಜತ್‌ನ ತೋಟದ ಮನೆಯಲ್ಲಿ ಬಂಧಿಸಿತು. ಬಂಧನವಾದ 48 ಗಂಟೆಗಳಲ್ಲಿ ಆಪ್ಟೆಗೆ ಜಾಮೀನು ನೀಡಲಾಯಿತು. ಪ್ರಸ್ತುತ ಈ ಪ್ರಕರಣ ಕಲ್ಯಾಣ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ಆಪ್ಟೆ ನಾಮನಿರ್ದೇಶನದ ಬಳಿಕ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಹರಿಯಾಯ್ದಿದ್ದು, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಬಿಜೆಪಿ ಅಸಂವೇದನಾಶೀಲತೆಯ ಉತ್ತುಂಗವನ್ನು ತಲುಪಿದೆ ಎಂದು ಆರೋಪಿಸಿದರು. ಬದ್ಲಾಪುರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ ನಾಮನಿರ್ದೇಶಿತ ಕಾರ್ಪೊರೇಟರ್ ಸ್ಥಾನವನ್ನು ನೀಡುವ ಮೂಲಕ, ಬಿಜೆಪಿ ತನ್ನ ಆದ್ಯತೆಗಳನ್ನು ಸ್ಪಷ್ಟಪಡಿಸಿದೆ. ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯು ಯಾವುದೇ ಸರ್ಕಾರಕ್ಕೆ ಆದ್ಯತೆಯಾಗಿರಬೇಕು ಎಂದರು.
ಟೀಕೆಗಳು ಹೆಚ್ಚಾದಂತೆ ಎಚ್ಚೆತ್ತುಕೊಂಡ ರಾಜ್ಯ ನಾಯಕರು ಆಪ್ಟೆ ರಾಜೀನಾಮೆ ಪಡೆದಿದ್ದಾರೆ ಎಂದು ವರದಿಯಾಗಿದೆ. ತಮ್ಮ ರಾಜೀನಾಮೆಯನ್ನು ಆಪ್ಟೆ ದೃಢಪಡಿಸಿದ್ದು, ಪಕ್ಷದ ಇಮೇಜ್ ಮತ್ತು ಶಾಲೆಯ ಖ್ಯಾತಿಗೆ ಯಾವುದೇ ಹಾನಿಯಾಗುವುದನ್ನು ತಡೆಯುವ ಉದ್ದೇಶದಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ(ಏಜೆನ್ಸೀಸ್).