Maharashtra Local Body | ಭಾರತೀಯ ಜನತಾ ಪಕ್ಷದ ಧ್ವಜಗಳು ( ಸಂಗ್ರಹ ಚಿತ್ರ)
ಮುಂಬೈ: ಮಹಾರಾಷ್ಟ್ರದ ನಗರ ಪಂಚಾಯತ್ ಮತ್ತು ನಗರ ಪರಿಷತ್ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅದ್ಭುತ ಪ್ರದರ್ಶನ ನೀಡಿದ್ದು. 100 ನಗರ ಸೇವಕ ಮತ್ತು 3 ನಗರ ಅಧ್ಯಕ್ಷ ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಮತದಾನ ಪ್ರಾರಂಭವಾಗುವ ಮೊದಲೇ ಈ ಗೆಲುವುಗಳು ದೊಡ್ಡ ಮುನ್ನಡೆಯನ್ನು ನೀಡಿವೆ.
ಜನಪ್ರಿಯ ಆಡಳಿತವೇ ಕಾರಣ
ಈ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಾಯಕತ್ವದ ಮೇಲಿನ ಸಾರ್ವಜನಿಕರ ನಂಬಿಕೆಯೇ ಈ ದೊಡ್ಡ ಗೆಲುವಿಗೆ ಕಾರಣ ಎಂದಿದ್ದಾರೆ. ಬಿಜೆಪಿ ಜಾರಿಗೆ ತಂದಿರುವ ಅಭಿವೃದ್ಧಿ ಮತ್ತು ಪ್ರಗತಿಪರ ಯೋಜನೆಗಳಿಂದ ವಿರೋಧ ಪಕ್ಷಗಳು ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಸೆಯನ್ನೆ ಬಿಟ್ಟಿವೆ ಎಂದರು.
ಉತ್ತರ ಮತ್ತು ಪಶ್ಚಿಮ ಮಹಾರಾಷ್ಟ್ರ ಪ್ರದೇಶಗಳಿಂದ ಹೆಚ್ಚಿನ ಅವಿರೋಧ ಆಯ್ಕೆಗಳಾಗಿದ್ದು, ಕ್ರಮವಾಗಿ 49 ಮತ್ತು 41, ಕೊಂಕಣ (4), ಮರಾಠವಾಡ (3) ಮತ್ತು ವಿದರ್ಭ (3) ಅವಿರೋಧ ಆಯ್ಕೆಯ ವರದಿಯಾಗಿವೆ.
ಪ್ರದೇಶ ಮತ್ತು ಅವರ ಅವಿರೋಧ ಆಯ್ಕೆಗಳು
ಇದು ಮಹಾರಾಷ್ಟ್ರದ ಪ್ರಮುಖ ಪ್ರದೇಶಗಳಲ್ಲಿನ ಬಿಜೆಪಿಯ ಬಲವಾದ ಹಿಡಿತವನ್ನು ಪ್ರತಿಬಿಂಬಿಸುತ್ತಿದ್ದು, ಈ ರಾಜಕೀಯ ಮೇಲುಗೈ ಮುಂಬರುವ ಚುನಾವಣೆಗಳಲ್ಲಿ ಆಡಳಿತ ಹಂತಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ 2 ರಂದು ಸ್ಥಳೀಯ ಸಂಸ್ಥೆ ಚುನಾವಣೆ
246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳಿಗೆ ಡಿಸೆಂಬರ್ 2 ರಂದು (ಮಂಗಳವಾರ) ಚುನಾವಣೆ ನಡೆಯಲಿದ್ದು, ಅದರ ಮರುದಿನ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಲೋಹಾದಲ್ಲಿ ಬಿಜೆಪಿ, ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದ್ದು, ಸೂರ್ಯವಂಶಿ ಕುಟುಂಬದ ಅಭ್ಯರ್ಥಿಗಳು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ ಎಂದ ಶರದ್ ಪವಾರ್
ಶರದ್ ಪವಾರ್ರ ಎನ್‌ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಬಿಎಂಸಿ ಚುನಾವಣೆಯಲ್ಲಿ ಎದುರಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ, ಉದ್ಧವ್ ಠಾಕ್ರೆ ಅವರ ಶಿವಸೇನೆ ಸೇರಿದಂತೆ ಸಂಪೂರ್ಣ ಎಂವಿಎ ಸೂತ್ರದಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಶರದ್ ಪವಾರ್ ಒಲವು ಹೊಂದಿದ್ದಾರೆ.
ಒಗ್ಗಟ್ಟನ್ನು ಮುಂದುವರೆಸುವ ಪ್ರಯತ್ನದ ಫಲವಾಗಿ ಎನ್ಸಿಪಿಯ ಹಿರಿಯ ನಾಯಕ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ವಾರ ನಡೆಯಲಿರುವ ಕಾಂಗ್ರೆಸ್-ಎನ್‌ಸಿಪಿ (ಎಸ್‌ಪಿ) ಜಂಟಿ ಸಭೆಯು ಮೈತ್ರಿಕೂಟದ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ.
ಉದ್ಧವ್ ಪ್ಲ್ಯಾನ್ ಬಿ..
ಒಂದು ವೇಳೆ ಕಾಂಗ್ರೆಸ್ ರಾಜ್ ಠಾಕ್ರೆರನ್ನು ಸೇರ್ಪಡೆ ಮಾಡಿಕೊಳ್ಳಲು ಮಹಾ ವಿಕಾಸ್ ಅಘಾಡಿಯ ನಾಯಕರು ನಿರಾಕರಿಸಿದರೆ, ಮಾಜಿ ಸಿಎಂ ಉದ್ಧವ್ ಠಾಕ್ರೆ ಪ್ಲಾನ್ ಬಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪರ್ಯಾಯ ರಂಗವು ಉದ್ಧವ್-ರಾಜ್-ಪವಾರ್ ಮೈತ್ರಿಕೂಟವಾಗಿದ್ದು, ಠಾಕ್ರೆ ಸೋದರರು, ಎನ್ಸಿಪಿಯ ಶರದ್ ಪವಾರ್ ಬೆಂಬಲದೊಂದಿಗೆ ಚುನಾವಣೆಯಲ್ಲಿ ಆಡಳಿತರೂಢ ಮಹಾಯುತಿ ಸರ್ಕಾರವನ್ನು ಎದುರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಏಕಾಂಗಿಯಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ ನಿರ್ಧಾರ
ವಿರೋಧ ಪಕ್ಷದ ಒಟಕ್ಕೆ ತಡೆಯೊಡ್ಡಲು ಮತ್ತೊಂದು ಪಕ್ಷ ಸಿದ್ಧವಾದಂತಿದ್ದು, ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ, ಎಸ್‌ಪಿ ಬಿಎಂಸಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕೊನೆಯ ಕ್ಷಣದ ದ್ರೋಹ, ಅಸಮಂಜಸ ನಿರ್ಧಾರ ತೆಗೆದುಕೊಳ್ಳುವುದು, ಅದರ ದುರಹಂಕಾರ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ನಿರ್ಲಕ್ಷಿಸಿದೆ ಎಂದು ಅಜ್ಮಿ ಆರೋಪಿಸಿದ್ದಾರೆ.
227 ಬಿಎಂಸಿ ಸ್ಥಾನಗಳ ಪೈಕಿ, ಸುಮಾರು 150 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಸ್‌ಪಿ ಯೋಚನೆ ನಡೆಸಿದ್ದು, ಕಾಂಗ್ರೆಸ್ ಸೇರಿದಂತೆ ಮಹಾವಿಕಾಸ್ ಅಘಾಡಿಯೊಂದಿಗಿನ ಮೈತ್ರಿಯನ್ನು ತಳ್ಳಿಹಾಕಿ, ಕೋಮು ಸಾಮರಸ್ಯದ ಬಗೆಗಿನ ತನ್ನ ಬದ್ಧತೆಯನ್ನು ಒತ್ತಿಹೇಳಿದೆ.
ಮಹಾಯುತಿ ಒಗ್ಗಟ್ಟು...
ವಿರೋಧ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ, ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಗಳನ್ನು ಒಳಗೊಂಡ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಬಿಎಂಸಿ ಚುನಾವಣೆಗಳನ್ನು ಒಗ್ಗಟ್ಟಿನಿಂದ ಸ್ಪರ್ಧಿಸುವ ನಿರ್ಧಾರವನ್ನು ದೃಢಪಡಿಸಿದೆ.
ಇದೇ ವಿಷಯವಾಗಿ ಮಾತನಾಡಿರುವ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ, ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತ ಮತ್ತು 51% ಮತಗಳನ್ನು ಪಡೆಯುವ ಗುರಿಯನ್ನು ಹೊಂದಿದೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನ ಡಿಸೆಂಬರ್ 2 ರಂದು ನಡೆಯಲಿದ್ದು, 3 ರಂದು ಮತ ಎಣಿಕೆ ನಡೆಯಲಿದೆ(ಏಜೆನ್ಸೀಸ್).