Womens Reservation Bill | ಮಸೂದೆ ಸೋಲಿನ ವಿರುದ್ಧ ಬೀದಿಗಿಳಿದ ಬಿಜೆಪಿ ನಾಯಕಿಯರು
ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿಗೆ 9Womens Reservation Bill) ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಹಿನ್ನಲೆಯಲ್ಲಿ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನಾಕಾರರು ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ದಹಿಸಿ ತಮ್ಮ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಸದೆ ಬನ್ಸುರಿ ಸ್ವರಾಜ್, ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ರಾಹುಲ್ ಗಾಂಧಿ ಮತ್ತು ಅವರ ಮಿತ್ರಪಕ್ಷಗಳು ಮಹಿಳೆಯರನ್ನು ಕೇವಲ ಮತಬ್ಯಾಂಕ್ ಆಗಿ ನೋಡುತ್ತಿವೆ ಎಂಬುದು ಸಾಬೀತಾಗಿದೆ, ಮಹಿಳೆಯರಿಗೆ ಅಧಿಕಾರ ಹಂಚಿಕೆ ಮಾಡುವ ವಿಷಯ ಬಂದಾಗ ಕಾಂಗ್ರೆಸ್ ಮತ್ತು ಅದರ ಸಹೋದ್ಯೋಗಿಗಳು ಯಾವಾಗಲೂ ಹಿಂದೆ ಸರಿಯುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬಳಿಕ ಪೊಲೀಸರು ಬನ್ಸುರಿ ಸ್ವರಾಜ್ ಮತ್ತು ಕಮಲ್‌ಜೀತ್ ಸೆಹ್ರಾವತ್ ಸೇರಿದಂತೆ ಹಲವು ನಾಯಕರನ್ನು ಬಂಧಿಸಿ, ಗುಂಪನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ರಾಹುಲ್ ಗಾಂಧಿ ನಿವಾಸದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ವಿರೋಧ ಪಕ್ಷಗಳ ದ್ವಂದ್ವ ನೀತಿಯನ್ನು ಪ್ರಶ್ನಿಸುತ್ತಾ, ಕಳೆದ ಮೂರು ದಶಕಗಳಿಂದ ದೇಶದ ಮಹಿಳೆಯರು ಈ ಮಸೂದೆಯ ವಿಷಯದಲ್ಲಿ ಅವಮಾನ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಸೂದೆ ಮಂಡನೆಯಾದಾಗಲೆಲ್ಲಾ ಕ್ಷೇತ್ರ ಪುನರ್ವಿಂಗಡಣೆ ಅಥವಾ ಕೋಟಾದ ಒಳಗೆ ಕೋಟಾದಂತಹ ನೆಪಗಳನ್ನು ಒಡ್ಡಿ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಸಂಸದೆ ಕಮಲ್‌ಜೀತ್ ಸೆಹ್ರಾವತ್ ಮಾತನಾಡಿ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಕಾಂಗ್ರೆಸ್‌ನಿಂದ ತಡೆಯಲು ಸಾಧ್ಯವಿಲ್ಲ. ಆದರೆ, ಮತ ವಿಭಜನೆಯ ಮೂಲಕ ಈ ಪ್ರಮುಖ ಮಸೂದೆಯನ್ನು ಸೋಲಿಸಿರುವುದು ಮಹಿಳೆಯರಿಗೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದರು. 2023ರಲ್ಲಿ ಅಂಗೀಕರಿಸಲ್ಪಟ್ಟ ನಾರಿ ಶಕ್ತಿ ವಂದನ ಅಧಿನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಈ ತಿದ್ದುಪಡಿ ಅತ್ಯಗತ್ಯವಾಗಿತ್ತು. ಆದರೆ ವಿರೋಧ ಪಕ್ಷಗಳ ಪಿತೂರಿಯಿಂದಾಗಿ ಮಹಿಳೆಯರಿಗೆ ಸಿಗಬೇಕಿದ್ದ ಹಕ್ಕು ಮತ್ತೊಮ್ಮೆ ವಿಳಂಬವಾಗಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು(ಏಜೆನ್ಸೀಸ್).