ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಚಳಿಗೆ ರಸ್ತೆ ಬದಿ ಬೆಂಕಿ ಕಾಯಿಸಿಕೊಳ್ತಿದ್ದ ಜನರಿಗೆ ಪಾನಮತ್ತ ಬಿಜೆಪಿ ಮುಖಂಡನೊಬ್ಬರ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ(Accident) ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಶನಿವಾರ(ಡಿ. 27) ವರದಿಯಾಗಿದೆ.
ಇಂದು ಬೆಳಗಿನ ಮೊರೆನಾ ಜಿಲ್ಲೆಯ ಜಾವ ಪೋರ್ಸಾ-ಜೋಟೈ ರಸ್ತೆ ಬೈಪಾಸ್ ಛೇದಕ ಬಳಿಯ ಮನೆಯ ಮುಂದೆ ಕೆಲವರು ಚಳಿಗೆ ಬೆಂಕಿ ಹಚ್ಚಿ ಕಾಯಿಸಿಕೊಳ್ತಿದ್ದರು. ಏತನ್ಮಧ್ಯೆ ಬಿಜೆಪಿ ಪೋರ್ಸಾ ಯುವ ಗ್ರಾಮೀಣ ಘಟಕದ ಉಪಾಧ್ಯಕ್ಷ ದೀಪೇಂದ್ರ ಭದೌರಿಯಾ ಕಾರನ್ನು ವೇಗವಾಗಿ ಬಂದು ಕುಳಿತಿದ್ದವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ದೀಪೇಂದ್ರ ಭೌದೌರಿಯಾ ಕುಡಿದು ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಐವರನ್ನು ಗ್ವಾಲಿಯರ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ 65 ವರ್ಷದ ರಾಮ್ ದತ್ ರಾಥೋಡ್ ಮತ್ತು 10 ವರ್ಷದ ಅರ್ನವ್ ಲಕ್ಷಕ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಉಳಿದ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಇನ್ನೂ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಮಂದಿಗೆ ಡಿಕ್ಕಿ ಹೊಡೆದ ಬಿಜೆಪಿ ನಾಯಕ ದೀಪೇಂದ್ರ ಭದೌರಿಯಾ ಅವರನ್ನು ಸ್ಥಳೀಯರು ಹಿಡಿದು, ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದರು. ಆದರೆ ಠಾಣೆಯಿಂದ ದೀಪೇಂದ್ರನನ್ನು ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೋಪಗೊಂಡ ಜನರು ಪೋರ್ಸಾ-ಜೋಟೈ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ದೀಪೇಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ (ಏಜೆನ್ಸೀಸ್).