ಮಾಜಿ ಸಿಎಂ ಅಶೋಕ್ ಗೆಹ್ಲೋಟ್  
ದೇಶ

ಬಿಜೆಪಿ ಕೋಮುವಾದಿ ಪಕ್ಷ; ಇಂದಿರಾ ಗಾಂಧಿ ಬದುಕಿದ್ದರೆ ಅದನ್ನು ನಿಷೇಧಿಸುತ್ತಿದ್ದರು: ಅಶೋಕ್ ಗೆಹ್ಲೋಟ್ ಕಿಡಿ: ಬಿಜೆಪಿ ತಿರುಗೇಟು | Ashok Gehlot

ಜೈಪುರ: ಬಿಜೆಪಿ ಕೋಮುವಾದಿ ಪಕ್ಷ, ಒಂದು ವೇಳೆ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬದುಕಿದ್ದರೆ ಅದನ್ನು ನಿಷೇಧಿಸುತ್ತಿದ್ದರು ಎಂದು ಹೇಳುವ ಮೂಲಕ ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ವಿವಾದದ ಕಿಡಿ ಹೊತ್ತಿಸಿದ್ದು, ಕಾಂಗ್ರೆಸ್ ಹಿಂದೂಗಳ ಬಗ್ಗೆ ದ್ವೇಷ ಸಾಧಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಜೈಪುರದಲ್ಲಿ ಭಾನುವಾರ(ಜೂ. 14) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗೆಹ್ಲೋಟ್, ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂದು ದೇಶದಲ್ಲಿ ಅತ್ಯಂತ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಇಂದು ಅಧಿಕಾರದಲ್ಲಿರುವವರು ಉದ್ದೇಶಪೂರ್ವಕವಾಗಿ ಧಾರ್ಮಿಕ ಧ್ರುವೀಕರಣವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದಿರಾ ಗಾಂಧಿಯವರಂತಹ ನಾಯಕಿ ಇಂದು ಬದುಕಿದ್ದರೆ, ಅವರು ಬಿಜೆಪಿಯಂತಹ ಪಕ್ಷವನ್ನು ನಿಷೇಧಿಸುತ್ತಿದ್ದರು. ಇಂದಿನ ವಾತಾವರಣ ಅತ್ಯಂತ ಅಪಾಯಕಾರಿ. ಇದನ್ನು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ದೇಶ ಇನ್ನೂ ಎಚ್ಚರಗೊಳ್ಳದಿದ್ದರೆ, ಜನರು ಮುಂದೆ ಅದರ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿಲ್ಲ. ದೇಶದ ಜನರಿಗೆ ತೋರಿಸಲು ನೀವು ಐದು ಸ್ಥಾನಗಳನ್ನು ನೀಡಬಹುದಿತ್ತು. ಆದರೆ ನೀವು 'ನಮ್ಮದು ಸಂಪೂರ್ಣ ಹಿಂದುತ್ವ ಪಕ್ಷ' ಎಂದು ಬಿಂಬಿಸಲು ಬಯಸುತ್ತೀರಿ. ಹಿಂದುತ್ವ ಬೆಂಬಲಿಗರನ್ನು ಕೆರಳಿಸಿ ಆಳುವುದೇ ಅವರ ಚಿಂತನೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದಿರಾ ಗಾಂಧಿಯವರಂತಹ ಉನ್ನತ ನಾಯಕಿ ಇಂದು ಜೀವಂತವಾಗಿದ್ದರೆ, ಅವರು ಬಿಜೆಪಿಯಂತಹ ಪಕ್ಷದ ಮೇಲೆ ನಿಷೇಧ ಹೇರುತ್ತಿದ್ದರು. ನೀವು ಹಿಂದುತ್ವದ ಕಾರ್ಯಸೂಚಿಯ ಮೇಲೆ ಮಾತ್ರ ಪಕ್ಷವನ್ನು ನಡೆಸುತ್ತೀರಾ? ಹಿಂದೂಗಳ ಹೆಸರಿನಲ್ಲಿ ಮಾತ್ರ ರಾಜಕೀಯ ಮಾಡಲು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ತಿರುಗೇಟು

ಗೆಹ್ಲೋಟ್ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಇದು ಕಾಂಗ್ರೆಸ್ ಹಿಂದೂಗಳು ಮತ್ತು ಹಿಂದುತ್ವದ ಬಗ್ಗೆ ಹೊಂದಿರುವ ದ್ವೇಷವನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಪಕ್ಷವು ಹಿಂದೂಗಳು ಮತ್ತು ಹಿಂದುತ್ವವನ್ನು ದ್ವೇಷಿಸುತ್ತದೆ. ಅದಕ್ಕೆ ಮತ್ತೊಂದು ಪುರಾವೆ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯ ರೂಪದಲ್ಲಿ ಹೊರಬಂದಿದೆ. ಸುಪ್ರೀಂ ಕೋರ್ಟ್ ಪ್ರಕಾರ ಹಿಂದುತ್ವವು ಒಂದು ಜೀವನ ವಿಧಾನ. ಅವರು ಅದನ್ನುಯಾಕೆ ನಿಷೇಧಿಸುತ್ತಾರೆ? ಎಂದಿದ್ದಾರೆ.
ಗೆಹ್ಲೋಟ್ ಅವರ ಹೇಳಿಕೆ ಕಾಂಗ್ರೆಸ್ ನಾಯಕರ ತುರ್ತು ಪರಿಸ್ಥಿತಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಮತ್ತು ಕಾಂಗ್ರೆಸ್ ಮುಸ್ಲಿಮರಿಗೆ ಮಾತ್ರ ಅನುಕೂಲಕರವಾದ ಭಾರತೀಯ ರಾಷ್ಟ್ರೀಯ ಕ್ಯಾಲಿಫೇಟ್ ಪಕ್ಷ. ಇದು ಇನ್ನು ಮುಂದೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಲ್ಲ. ಇದು ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್ ಆಗಿ ಮಾರ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).