Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ಬಿಜೆಪಿ ಹ್ಯಾಟ್ರಿಕ್ ಜಯಭೇರಿ...ಕಾಂಗ್ರೆಸ್‌ ನಾಯಕರು ಸೋಲಿನಲ್ಲೂ ಶತಕ ಭಾರಿಸಲಿದ್ದಾರೆ; ಬಾರ್ಪೇಟಾದಲ್ಲಿ ಪ್ರಧಾನಿ ಮೋದಿ ಭವಿಷ್ಯ | Narendra Modi

ದಿಸ್ಪೂರ್​​: ಮುಂಬರುವ ಚುನಾವಣೆಯಲ್ಲಿ ಎರಡು ಫಲಿತಾಂಶಗಳು ಈಗಾಗಲೇ ಖಚಿತವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಒಂದು ಬಿಜೆಪಿ-ಎನ್‌ಡಿಎ ಮೈತ್ರಿಕೂಟದ ಹ್ಯಾಟ್ರಿಕ್ ಗೆಲುವಾದರೆ, ಎರಡನೆಯದ್ದು ಕಾಂಗ್ರೆಸ್‌ನ ನಾಮ್‌ದಾರ್ (ರಾಹುಲ್ ಗಾಂಧಿ) ಸೋಲಿನಲ್ಲಿ ಶತಕ ಬಾರಿಸಲಿದ್ದಾರೆ ಎಂದು ಹೇಳಿದರು.
ಅಸ್ಸಾಂನ ಬಾರ್ಪೇಟಾದಲ್ಲಿ ನಡೆದ ಬೃಹತ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟದ ಸತತ ಮೂರನೇ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಅಸ್ಸಾಂನ ಜನರು ದೆಹಲಿಯಲ್ಲಿ ಕುಳಿತಿರುವ ರಾಜಮನೆತನದ ನಾಯಕರು ತಮ್ಮ ಸೋಲುಗಳ ಸಂಖ್ಯೆ ನೂರರ ಗಡಿ ತಲುಪುವುದನ್ನು ಖಚಿತಪಡಿಸಲಿದ್ದಾರೆ ವ್ಯಂಗ್ಯವಾಡಿದ ಪ್ರಧಾನಿ, ಕಾಂಗ್ರೆಸ್‌ಗೆ ದೇಶದ ಬಗ್ಗೆ ಯಾವುದೇ ದೂರದೃಷ್ಟಿಯಿಲ್ಲ ಮತ್ತು ಅದು ಭ್ರಷ್ಟಾಚಾರದಿಂದ ನಡೆಸಲ್ಪಡುವ ಸೀಮಿತ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ವ್ಯತಿರಿಕ್ತವೆಂಬಂತೆ ಬಿಜೆಪಿಯು ಅಸ್ಸಾಂನ ಅಭಿವೃದ್ಧಿಗಾಗಿ ದೊಡ್ಡ ದೃಷ್ಟಿಕೋನವನ್ನು ಹೊಂದಿದ್ದು, ಕಳೆದ ಒಂದು ದಶಕದಲ್ಲಿ ನಮ್ಮ ಸರ್ಕಾರ ಅಸ್ಸಾಂಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಅವಿಶ್ರಾಂತವಾಗಿ ಶ್ರಮಿಸಿದೆ ಮತ್ತು ಮುಂದಿನ ವರ್ಷಗಳಲ್ಲಿ ರಾಜ್ಯವು ಸಂಪೂರ್ಣವಾಗಿ ಸ್ವಾವಲಂಬಿಯಾಗಲಿದೆ ಎಂದು ಭರವಸೆ ನೀಡಿದರು.

ಬಿಜೆಪಿ ಸಂಸ್ಥಾಪನಾ ದಿನ

ಇದೇ ಸಂದರ್ಭದಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ, ರಾಷ್ಟ್ರ ಮೊದಲು ಎಂಬ ಮಂತ್ರದೊಂದಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ತಮ್ಮ ಸಂಕಲ್ಪವಾಗಿದ್ದು, ಒಂದೆರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಎಂದಿಗೂ ತನ್ನ ರಿಪೋರ್ಟ್ ಕಾರ್ಡ್‌ನೊಂದಿಗೆ ಜನರ ಬಳಿಗೆ ಹೋಗುವುದಿಲ್ಲ, ಆದರೆ ಬಿಜೆಪಿ ತಾನು ಮಾಡಿದ ಕೆಲಸಗಳನ್ನು ಮತ್ತು ರೈತರ ಸಮೃದ್ಧಿಗಾಗಿ ಕೈಗೊಂಡ ಕ್ರಮಗಳನ್ನು ಸದಾ ಸಾರ್ವಜನಿಕರ ಮುಂದೆ ಮಂಡಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಸಶಸ್ತ್ರ ಪಡೆಗಳ ಶೌರ್ಯವನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ ಮೋದಿ, ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್​ ಸ್ಟ್ರೈಕ್ ಸಮಯದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳು ಪಾಕಿಸ್ತಾನದ ಅಜೆಂಡಾಕ್ಕೆ ಪೂರಕವಾಗಿದ್ದವು ಎಂದು ಟೀಕಿಸಿದರು. ಈ ಪಾಕಿಸ್ತಾನ ಸಂಪರ್ಕ ದೇಶಕ್ಕೆ ಹಾನಿ ಮಾಡಿದ್ದು, ಒಂದು ಶ್ರೇಣಿ ಒಂದು ಪಿಂಚಣಿ ವಿಷಯದಲ್ಲಿ ಕಾಂಗ್ರೆಸ್ ಸಶಸ್ತ್ರ ಪಡೆಗಳಿಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.
ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಮತದಾನ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಎಲ್ಲಾ ಫಲಿತಾಂಶಗಳು ಹೊರಬೀಳಲಿವೆ(ಏಜೆನ್ಸೀಸ್​​).