ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಲ್ಲಿದ್ದ ಸುಮಾರು 92 ಲಕ್ಷ ಫಲಾನುಭವಿಗಳನ್ನು ಅಲ್ಲಿನ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಕ್ರಮ, ಅನರ್ಹತೆ ಆಧಾರದ ಮೇಲೆ ಇ-ಕೆವೈಸಿ ಮೂಲಕ ತೆಗೆದು ಹಾಕಿದೆ ಎಂದು ಮಂಗಳವಾರ(ಜು. 14) ವರದಿಯಾಗಿದೆ.
ಕಳೆದ ವರ್ಷ ಈ ಯೋಜನೆಯಲ್ಲಿ ಸುಮಾರು 3,000 ಕೋಟಿ ರೂ. ಗಳಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ನೀಡಿತ್ತು. ಈ ಹಿನ್ನೆಲೆ ಇ-ಕೆವೈಸಿ ಪ್ರಕ್ರಿಯೆಯ ಮೂಲಕ ಸುಮಾರು 80 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗುವುದು ಎಂದು ಈ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು.
ಆರಂಭಿಕವಾಗಿ 2.4 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದರು. ಸದ್ಯ ಕಳೆದ ಕೆಲವು ದಿನಗಳಿಂದ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲು 80 ಲಕ್ಷ ಜನರನ್ನು ತೆಗೆದುಹಾಕಲಾಗಿತ್ತು. ಈಗ ಮತ್ತೆ 12 ಲಕ್ಷ ಫಲಾನುಭವಿಗಳನ್ನು ಕೈಬಿಡಲಾಗಿದೆ. ಒಟ್ಟು ಶೇ. 38ರಷ್ಟು ಫಲಾನುಭವಿಗಳನ್ನು ತೆಗೆದು ಹಾಕಲಾಗಿದೆ.
ಕಡ್ಡಾಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸದ ಕಾರಣ ಹೊರತುಪಡಿಸಿ ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದ ವಿವಿಧ ಕಾರಣಗಳಿಂದಾಗಿ ಲಕ್ಷಾಂತರ ಜನರನ್ನು ಕೈಬಿಡಲಾಗಿದೆ. ಸರಿಸುಮಾರು 50 ರಿಂದ 55 ಲಕ್ಷ ಮಹಿಳೆಯರು ನಿಗದಿತ ಸಮಯದೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಎನ್ನಲಾಗಿದೆ.
ಏತನ್ಮಧ್ಯೆ, 12 ಲಕ್ಷ ಮಹಿಳೆಯರ ವಾರ್ಷಿಕ ಕುಟುಂಬದ ಆದಾಯವು ಯೋಜನೆಯ ನಿಗದಿತ ಮಿತಿಯನ್ನು ಮೀರಿದೆ. ಮತ್ತು 4.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗರಿಷ್ಠ ವಯಸ್ಸಿನ ಮಿತಿಯಾದ 65 ವರ್ಷಗಳನ್ನು ಮೀರಿದ್ದಾರೆ. ಇನ್ನೂ ಮಹಿಳೆಯರಿಗಾಗಿ ಮಾತ್ರ ತಂದ ಈ ಯೋಜನೆಗೆ ಅರ್ಜಿ ಸಲ್ಲಿಸಿದ 14 ಸಾವಿರ ಪುರುಷರನ್ನು ಸಹ ತೆಗೆದುಹಾಕಲಾಗಿದೆ (ಏಜೆನ್ಸೀಸ್).