BJP > ಜೆನ್ ಝಿ ಪಡೆ ಸೆಳೆಯಲು ಬಿಜೆಪಿ ತಂತ್ರ 
ದೇಶ

ಜೆನ್ ಝಿ ಪಡೆ ಸೆಳೆಯಲು ಬಿಜೆಪಿ ತಂತ್ರ: ನಿತಿನ್ ನವೀನ್ ಮತ್ತು ಸ್ಮೃತಿ ಇರಾನಿ ನೇತೃತ್ವದ ವಿಶೇಷ ತಂಡದಿಂದ ಯುವಜನರತ್ತ ಬೃಹತ್ ಹೆಜ್ಜೆ! | BJP

ಯುವಜನತೆ ಹಾಗೂ ಜೆನ್ ಝಿ ಪೀಳಿಗೆಯನ್ನು ಪಕ್ಷದತ್ತ ಸೆಳೆಯಲು ಬಿಜೆಪಿ ದೊಡ್ಡ ತಂತ್ರ ರೂಪಿಸಿದ್ದು, ಇದಕ್ಕಾಗಿ ಬೃಹತ್ ವಿಶೇಷ ಪಡೆಯನ್ನು ರಚಿಸಲು ನಿರ್ಧರಿಸಿದೆ. ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅಧ್ಯಕ್ಷತೆಯಲ್ಲಿ ನಡೆದ ನೂತನ ಪದಾಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಈ ವಿಶೇಷ ತಂಡದಲ್ಲಿ ನಿತಿನ್ ನವೀನ್ ಹಾಗೂ ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ವಿನೋದ್ ತಾವ್ಡೆ, ಹರ್ಷ ಸಂಘವಿ, ಒ ಪಿ ಚೌಧರಿ ಮತ್ತು ಬಿಜೆಪಿಯ ಹಲವು ನಾಯಕರು ಈ ತಂಡದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಯುವಜನತೆಯನ್ನು, ವಿಶೇಷವಾಗಿ ಜೆನ್ ಝಿ ಪೀಳಿಗೆಯನ್ನು ತಲುಪುವ ಉದ್ದೇಶದಿಂದ ಈ ತಂಡವು ವಿಶೇಷ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಿ, ನೇರವಾಗಿ ಅವರೊಂದಿಗೆ ಸಂವಾದ ನಡೆಸಿ ಅವರ ನಿರೀಕ್ಷೆಗಳು ಮತ್ತು ಕಳಕಳಿಗಳನ್ನು ಅರ್ಥೈಸಿಕೊಳ್ಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ತಂಡವು ಯುವಜನರನ್ನು ಬಿಜೆಪಿಯ ನೀತಿಗಳು ಮತ್ತು ಸಿದ್ಧಾಂತದೊಂದಿಗೆ ಜೋಡಿಸಲು ಸಹಕರಿಸಲಿದೆ.

ವಂದೇ ಮಾತರಂ ಕುರಿತಾಗಿ ನಿರ್ಣಯ ಅಂಗೀಕಾರ

ತನ್ನ ನಿರ್ಣಯದಲ್ಲಿ ಬಿಜೆಪಿ, ವಂದೇ ಮಾತರಂ ಗೀತೆಯನ್ನು ಭಾರತ ಮಾತೆಗೆ ಸಲ್ಲಿಸುವ ಭಕ್ತಿಪೂರ್ವಕ ನಮನ, ಸ್ವಾತಂತ್ರ್ಯ ಸಂಗ್ರಾಮದ ಮಂತ್ರ ಮತ್ತು ಭಾರತದ ರಾಷ್ಟ್ರೀಯ ಪ್ರಜ್ಞೆಯ ಅಮರ ಸಂಕೇತ ಎಂದು ಪರಿಗಣಿಸುವುದಾಗಿ ತಿಳಿಸಿದೆ. ವಂದೇ ಮಾತರಂಗೆ ಸಂಬಂಧಿಸಿದ ವಿಷಯವು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿದ್ದಲ್ಲ, ಇದು ಭಾರತದ ಭವ್ಯ ಪರಂಪರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದವರನ್ನು ಗೌರವಿಸುವ ಪ್ರಮುಖ ವಿಷಯವಾಗಿದೆ ಎಂದು ಹೇಳಿದೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ವಂದೇ ಮಾತರಂನ ಐತಿಹಾಸಿಕ ಪರಂಪರೆಯನ್ನು ಕುಗ್ಗಿಸಲು ಸಾಧ್ಯವಿಲ್ಲ ಹಾಗೂ ಅದರ ಗೌರವ ಮತ್ತು ಪರಂಪರೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಯುವಜನರಿಗೆ ವಂದೇ ಮಾತರಂ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ.
ವಂದೇ ಮಾತರಂ ಗೀತೆಯ ಪ್ರತಿಯೊಂದು ಪದಗಳು ಎಷ್ಟು ಶಕ್ತಿಯುತವಾಗಿದ್ದವೆಂದರೆ, ಒಮ್ಮೆ ಅವುಗಳಿಂದ ಇಡೀ ಸಾಮ್ರಾಜ್ಯವೇ ಅಲ್ಲಾಡಿಹೋಗಿತ್ತು ಎಂಬುದನ್ನು ಭಾರತದ ಜನತೆ ನೆನಪಿನಲ್ಲಿಡಬೇಕು. ಈ ಪದಗಳು ಪ್ರತಿರೋಧದ ಕಿಚ್ಚನ್ನು ಹಚ್ಚುತ್ತಿದ್ದವು ಎಂಬ ಕಾರಣಕ್ಕೆ ಬ್ರಿಟಿಷರು ಇದನ್ನು ಹತೋಟಿಯಲ್ಲಿಡಲು ಯತ್ನಿಸಿದ್ದರು. ಆದರೆ ಭಾರತದ ಪೀಳಿಗೆಗಳು ಇದನ್ನು ಸ್ವಾತಂತ್ರ್ಯ, ತ್ಯಾಗ ಮತ್ತು ರಾಷ್ಟ್ರೀಯ ಹೆಮ್ಮೆಯ ಮಂತ್ರವಾಗಿ ಸ್ವೀಕರಿಸಿದ್ದವು ಎಂದು ಬಿಜೆಪಿ ತನ್ನ ನಿರ್ಣಯದಲ್ಲಿ ತಿಳಿಸಿದೆ(ಏಜೆನ್ಸೀಸ್​).