Shashi Tharoor > ಪ್ರಧಾನಿ ಮೋದಿ ನಡೆ ಬೆಂಬಲಿಸಿದ ಶಶಿ ತರೂರ್​​! 
ದೇಶ

ಪ್ರಧಾನಿ ಮೋದಿ ನಡೆ ಬೆಂಬಲಿಸಿದ ಶಶಿ ತರೂರ್​​!...ನಾವಿಕರ ಸುರಕ್ಷತೆ ವಿಚಾರದಲ್ಲಿ ರಾಹುಲ್ ನಿಲುವು ಬೆತ್ತಲಾಗಿದೆ ಎಂದು ಬಿಜೆಪಿ ವಾಗ್ದಾಳಿ | Shashi Tharoor

ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಭಾರತೀಯ ನಾವಿಕರ ಸುರಕ್ಷತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಜಿ೭ ಶೃಂಗಸಭೆಯಲ್ಲಿ ನೀಡಿದ ಸಂದೇಶವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಬೆಂಬಲಿಸಿದ್ದಾರೆ. ತರೂರ್ ಅವರ ಈ ನಡೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಮತ್ತೊಮ್ಮೆ ಪ್ರಬಲ ರಾಜಕೀಯ ಅಸ್ತ್ರ ಒದಗಿಸಿದಂತಾಗಿದೆ.
ವಾಣಿಜ್ಯ ಹಡಗುಗಳಲ್ಲಿರುವ ನಾಗರಿಕ ನಾವಿಕರು ಯುದ್ಧದ ಸಮಯದಲ್ಲಿ ದಾಳಿಗೆ ಗುರಿಯಾಗಬಾರದು ಎಂಬ ಭಾರತದ ಕಳವಳವನ್ನು ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿದ್ದಾರೆ ಎಂದು ತರೂರ್ ಸ್ಪಷ್ಟಪಡಿಸಿದ್ದು, ಫ್ರಾನ್ಸ್‌ನ ಇವಿಯಾನ್‌ನಲ್ಲಿ ನಡೆದ ಜಿ೭ ಶೃಂಗಸಭೆಯ ಸಂದರ್ಭದ ದ್ವಿಪಕ್ಷೀಯ ಸಭೆಯಲ್ಲಿ, ಪ್ರಧಾನಿಯವರು ಬಹಿರಂಗ ಹಾಗೂ ಖಾಸಗಿ ಚರ್ಚೆಗಳೆರಡರಲ್ಲೂ ಭಾರತದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ ಎಂದು ಅವರು ತಿಳಿಸಿದರು.

ಜನರ ಜೀವ ತೆಗೆಯಬೇಡಿ ಎಂದಿದ್ದ ಪ್ರಧಾನಿ ಮೋದಿ

ಭಾರತೀಯ ಧ್ವಜ ಹೊಂದಿರುವ ಹಾಗೂ ಇತರ ಹಡಗುಗಳಲ್ಲಿ ಲಕ್ಷಾಂತರ ಭಾರತೀಯ ನಾವಿಕರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅವರು ನಿಮ್ಮ ದಿಗ್ಬಂಧನವನ್ನು ಉಲ್ಲಂಘಿಸುತ್ತಿದ್ದರೂ ಸಹ, ಅವರನ್ನು ತಡೆಯಲು ಬೇರೆ ಮಾರ್ಗಗಳನ್ನು ಹುಡುಕಬೇಕೇ ಹೊರತು ಜನರ ಜೀವ ತೆಗೆಯಬಾರದು ಎಂದು ಪ್ರಧಾನಿಯವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್‌ನ ಈ ಹಿರಿಯ ಸಂಸದರು ವಿವರಿಸಿದ್ದಾರೆ.
ಒಮಾನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಜೀವ ಕಳೆದುಕೊಂಡ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ಮೌನ ವಹಿಸಿದ್ದರು ಎಂದು ಬುಧವಾರವಷ್ಟೇ ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿತ್ತು. ಈ ದುರಂತದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಪ್ರಧಾನಿಯವರು ಬಹಿರಂಗವಾಗಿ ಈ ಸೂಕ್ಷ್ಮ ವಿಷಯವನ್ನು ಪ್ರಸ್ತಾಪಿಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೈ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಅಮಾಯಕ ಭಾರತೀಯರ ಸಾವಿಗೆ ಕಾರಣವಾದ ಅಮೆರಿಕಾದಿಂದ ಯಾವುದೇ ಅಧಿಕೃತ ಕ್ಷಮೆಯಾಚನೆ ಅಥವಾ ಕನಿಷ್ಠ ವಿಷಾದವನ್ನೂ ಸಹ ಕೇಂದ್ರ ಸರ್ಕಾರ ಏಕೆ ಕೋರಿಲ್ಲ ಎನ್ನುವುದು ಕಾಂಗ್ರೆಸ್​​ನ ವಾದವಾಗಿತ್ತು.

ರಾಹುಲ್ ವಿರುದ್ಧ ಬಿಜೆಪಿ ಕಿಡಿ

ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಯನ್ನು ಕಾಂಗ್ರೆಸ್ ನಾಯಕರೇ ಮುಕ್ತವಾಗಿ ಶ್ಲಾಘಿಸುತ್ತಿರುವುದು ರಾಹುಲ್ ಗಾಂಧಿ ಅವರ ನಿಲುವನ್ನು ಸಂಪೂರ್ಣವಾಗಿ ಬೆತ್ತಲು ಮಾಡಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ವಿಷಯ ಬಂದಾಗ ಪ್ರಧಾನಿ ಮೋದಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಆದರೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡುವಲ್ಲಿ ರಾಹುಲ್ ಗಾಂಧಿ ಎಲ್ಲರಿಗಿಂತ ಮುಂದಿರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಉತ್ತಮ ವ್ಯಕ್ತಿತ್ವದ ನಾಯಕ ಎಂದಿದ್ದ ಟ್ರಂಪ್​

ದೀರ್ಘ 16 ತಿಂಗಳುಗಳ ಬಳಿಕ ನಡೆದ ಈ ಮಹತ್ವದ ಮೋದಿ-ಟ್ರಂಪ್ ದ್ವಿಪಕ್ಷೀಯ ಸಭೆಯಲ್ಲಿ, ಹೊರ್ಮುಜ್ ಜಲಸಂಧಿ ಸೇರಿದಂತೆ ಇಡೀ ಗಲ್ಫ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಭದ್ರತೆಯ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದೇ ವೇಳೆ ಪ್ರಧಾನಿಯವರ ರಾಜತಾಂತ್ರಿಕ ನಡೆಯನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿಯವರನ್ನು ಉತ್ತಮ ವ್ಯಕ್ತಿತ್ವದ ನಾಯಕ ಮತ್ತು ಕಠಿಣ ಸಂಧಾನಕಾರ ಎಂದು ಬಣ್ಣಿಸಿದ್ದರು. ಗಲ್ಫ್ ಪ್ರದೇಶದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಈ ಸಭೆಯಲ್ಲಿ ಒತ್ತಿಹೇಳಿದ್ದರು(ಏಜೆನ್ಸೀಸ್​​).