Samrat Chaudhary | ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ  
ದೇಶ

ಮೋದಿ-ನಿತೀಶ್ ಮಾದರಿಯಲ್ಲೇ ಬಿಹಾರದ ಆಡಳಿತ.. ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿಎಂ ಸಾಮ್ರಾಟ್ ಚೌಧರಿ ಘೋಷಣೆ! | Samrat Chaudhary

ಪಟನಾ: ಬಿಹಾರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ-ನಿತೀಶ್ ಕುಮಾರ್​ ಮಾದರಿ ಅತ್ಯಂತ ಸೂಕ್ತವಾಗಿದೆ, ಅದೇ ಹಾದಿಯಲ್ಲಿಯೇ ಆಡಳಿತ ಮುಂದುವರಿಯಲಿದ್ದು, ರಾಜ್ಯಕ್ಕಾಗಿ ತಕ್ಷಣವೇ ಕೆಲಸ ಪ್ರಾರಂಭಿಸುವುದಾಗಿ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Chaudhary) ಭರವಸೆ ನೀಡಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಚೌಧರಿ, ಮೋದಿ-ನಿತೀಶ್​ ಜೋಡಿಯ ಅಭಿವೃದ್ದಿಯ ಮಾದರಿ ಬಿಹಾರದ ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು ಹೇಳಿದರು. ಪ್ರಮಾಣವಚನ ಸಮಾರಂಭ ಮುಗಿದ ಕೂಡಲೇ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ.

ಪ್ರಧಾನಿ ಮೋದಿ ವಿಶ್​..

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಾಮ್ರಾಟ್ ಚೌಧರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದು, ಚೌಧರಿ ಅವರ ಶಕ್ತಿ, ಸಾರ್ವಜನಿಕ ಸೇವೆಗೆ ಸಮರ್ಪಣೆ ಮತ್ತು ತಳಮಟ್ಟದ ರಾಜಕೀಯ ಅನುಭವವು ಬಿಹಾರ ರಾಜ್ಯಕ್ಕೆ ದೊಡ್ಡ ಮಟ್ಟದ ಪ್ರಯೋಜನವನ್ನು ನೀಡಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೌಧರಿ ಸಮರ್ಥ ನಾಯಕತ್ವದಲ್ಲಿ ಜನರ ಆಕಾಂಕ್ಷೆಗಳು ಈಡೇರಲಿವೆ ಮತ್ತು ಬಿಹಾರವು ಸರ್ವತೋಮುಖ ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟಲಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.
ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳಿದ ಬಳಿಕ ಈ ನಾಯಕತ್ವ ಬದಲಾವಣೆ ನಡೆದಿದ್ದು, ಈ ಹಿಂದೆ ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಚೌಧರಿ ಅವರನ್ನೇ ಮುಂದಿನ ನಾಯಕ ಎಂದು ನಿತೀಶ್ ಕುಮಾರ್ ಈ ಹಿಂದೆಯೇ ಸೂಚಿಸಿದ್ದರು ಎನ್ನಲಾಗಿದೆ. ಜೆಡಿಯು ನಾಯಕರಾದ ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಕುಮಾರ್ ಯಾದವ್ ರಾಜ್ಯದ ನೂತನ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೂತನ ಸಂಪುಟಕ್ಕೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಶುಭಾಶಯ ತಿಳಿಸಿದ್ದು, ನಿತೀಶ್ ಕುಮಾರ್ ಕಳೆದ 2 ದಶಕಗಳಿಂದ ನಿರ್ಮಿಸಿರುವ ಆಡಳಿತ ಪರಂಪರೆಯನ್ನು ಸಾಮ್ರಾಟ್ ಚೌಧರಿ ಯಶಸ್ವಿಯಾಗಿ ಮುಂದುವರಿಸಲಿದ್ದಾರೆ, ಆಡಳಿತದಲ್ಲಿ ಎಲ್ಲಾದರೂ ಸಣ್ಣಪುಟ್ಟ ನ್ಯೂನತೆಗಳಿದ್ದರೆ ಅವುಗಳನ್ನು ಸರಿಪಡಿಸಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಾಮರ್ಥ್ಯ ಚೌಧರಿ ಅವರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ದಿಲೀಪ್ ಜೈಸ್ವಾಲ್ ಕೂಡ ನೂತನ ಸಿಎಂ, ಡಿಸಿಎಂಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ನಿತೀಶ್ ಕುಮಾರ್ ಮಾರ್ಗದರ್ಶನದಲ್ಲಿ ರೂಪುಗೊಂಡ ಅಭಿವೃದ್ಧಿಶೀಲ ಬಿಹಾರದ ದೃಷ್ಟಿಕೋನವನ್ನು ಚೌಧರಿ ಸಾಕಾರಗೊಳಿಸಲಿದ್ದಾರೆ ಎಂದು ಆಶಿಸಿದರು. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಈವರೆಗೆ ಮುಖ್ಯಮಂತ್ರಿ ಸ್ಥಾನದಿಂದ ದೂರವೇ ಇದ್ದ ಬಿಜೆಪಿಗೆ ಈಗ ದೊಡ್ಡ ಜವಾಬ್ದಾರಿ ಸಿಕ್ಕಿದೆ(ಏಜೆನ್ಸೀಸ್​).