Railway Accident | Railway Accident
ಬಾರ್ಹ್: ಬಿಹಾರದ ದಾನಾಪುರ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುವ ಬಾರ್ಹ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ ಅತ್ಯಂತ ದಾರುಣ ಘಟನೆಯೊಂದು ನಡೆದಿದ್ದು, ವೇಗವಾಗಿ ಬಂದ ಪಾಟ್ನಾ–ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ (Railway Accident) ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಗಳವಾರ (ಮಾ.24) ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಈ ಅವಘಡ ನಡೆದಿದ್ದು, ದಾನಾಪುರ ಆರ್‌ಪಿಎಫ್ ಕಮಾಂಡೆಂಟ್ ಉದಯ್ ಸಿಂಗ್ ಪವಾರ್ ನೀಡಿರುವ ಮಾಹಿತಿಯ ಪ್ರಕಾರ, ಆ ವ್ಯಕ್ತಿಯು ತಂಬಾಕು ಉಗುಳುವ ಉದ್ದೇಶದಿಂದ ಪ್ಲಾಟ್‌ಫಾರ್ಮ್‌ನ ಅಂಚಿಗೆ ಹೋಗಿದ್ದರು. ಇದೇ ಸಮಯದಲ್ಲಿ ವೇಗವಾಗಿ ಬಂದ ವಂದೇ ಭಾರತ್ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಅದರ ಹೊಡೆತದ ರಭಸಕ್ಕೆ ವ್ಯಕ್ತಿಯು ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಬಾರ್ಹ್ ಆರ್‌ಪಿಎಫ್ ಮತ್ತು ಜಿಆರ್‌ಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ ಎಂದು ಬಕ್ತಿಯಾರ್‌ಪುರ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜವಾಹರ್ ಲಾಲ್ ತಿಳಿಸಿದ್ದಾರೆ.
ಈ ಸಂಬಂಧ ಬಾರ್ಹ್ ಜಿಆರ್‌ಪಿ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ದಾನಾಪುರ ರೈಲ್ವೆ ಅಧಿಕಾರಿಗಳು ಮತ್ತು ಆರ್‌ಪಿಎಫ್ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದ್ದು, ರೈಲುಗಳು ನಿಲ್ದಾಣಕ್ಕೆ ಬರುವಾಗ ಅಥವಾ ಹೊರಡುವಾಗ ಪ್ಲಾಟ್‌ಫಾರ್ಮ್‌ನ ಅಂಚಿನಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕ ಎಂದಿದ್ದಾರೆ(ಏಜೆನ್ಸೀಸ್).