ನವದೆಹಲಿ: ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಅಪರಾಧಕ್ಕೆ ಒಳಗಾದ ಮಹಿಳೆಗೆ ನ್ಯಾಯ ಸಿಗಬೇಕಾದರೆ ಮತ್ತೊಂದು ಹೋರಾಟವನ್ನೇ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ನಿರಂತರ ಒತ್ತಡ ಮತ್ತು ಬೆದರಿಕೆ ಹಾಕಲಾಗುತ್ತಿದೆ ಎಂದು ಕುಟುಂಬ ಆರೋಪಿಸಿರುವ ಬೆನ್ನಲ್ಲೇ, ಸಂತ್ರಸ್ತ ಮಹಿಳೆಯನ್ನು ಕಟ್ಟಡದ ಮೇಲ್ಛಾವಣಿಯಿಂದ ಕೆಳಕ್ಕೆ ಎಸೆದಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಸುಮಾರು 12ರಿಂದ 15 ಅಡಿ ಎತ್ತರದಿಂದ ಬಿದ್ದಿರುವ 30 ವರ್ಷದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಮೇಲಿನ ದೌರ್ಜನ್ಯದ ಸರಣಿ ಪ್ರಕರಣಗಳು ಇದೀಗ ಆತಂಕಕ್ಕೆ ಕಾರಣವಾಗಿವೆ. ಐದು ತಿಂಗಳ ಹಿಂದೆ ಐವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಆ ಪ್ರಕರಣದ ವಿಚಾರಣೆ ಮತ್ತು ತನಿಖೆ ನಡೆಯುತ್ತಿರುವ ನಡುವೆಯೇ ಆರೋಪಿಗಳ ಕಡೆಯಿಂದ ಪ್ರಕರಣ ಹಿಂಪಡೆಯುವಂತೆ ಬೆದರಿಕೆಗಳು ಬರುತ್ತಿದ್ದವು ಎಂಬುದು ಕುಟುಂಬದ ಆರೋಪವಾಗಿದೆ.
ಸಂತ್ರಸ್ತೆ ನೀಡಿದ್ದ ದೂರಿನ ಪ್ರಕಾರ, ಕಳೆದ ಜೂನ್ನಲ್ಲಿ ರಾತ್ರಿ ಸುಮಾರು 11.30ರ ವೇಳೆಗೆ ಮಹಿಳೆ ಮನೆಯಿಂದ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಐವರು ವ್ಯಕ್ತಿಗಳು ಆಕೆಯ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳೆಯ ಪತಿಯನ್ನು ಮನೆಯೊಳಗಿನ ಕೋಣೆಯಲ್ಲಿ ಕೂಡಿ ಹಾಕಿದ ಆರೋಪಿಗಳು, ಮಹಿಳೆಯನ್ನು ಬಲವಂತವಾಗಿ ಹಿಡಿದು ಬಾಯಿ ಮುಚ್ಚಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಐವರೂ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಆಕೆಯನ್ನು ಮನೆಯ ಸಮೀಪವೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
ಈ ದೌರ್ಜನ್ಯದ ಭೀಕರತೆ ಮಹಿಳೆಯ ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿತ್ತು. ವೈದ್ಯರು ಆಕೆಯ ಖಾಸಗಿ ಅಂಗದಿಂದ ಕಾರ್ಟ್ರಿಡ್ಜ್ನಂತಹ ವಸ್ತು, ಕಲ್ಲು ಹಾಗೂ ಮರದ ತುಂಡನ್ನು ಹೊರತೆಗೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಐದನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಪ್ರಕರಣ ದಾಖಲಾದ ಬಳಿಕವೂ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆಗಳು ನಿಂತಿರಲಿಲ್ಲ ಎನ್ನಲಾಗಿದೆ.
ಅತ್ಯಾಚಾರ ಪ್ರಕರಣ ದಾಖಲಾದ ಸುಮಾರು ಮೂರು ತಿಂಗಳ ಬಳಿಕ ಕೆಲವರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಲು ಯತ್ನಿಸಿದ್ದರು ಎಂದು ಕುಟುಂಬ ಆರೋಪಿಸಿದೆ. ಈ ಬಗ್ಗೆಯೂ ಪೊಲೀಸರಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಕುಟುಂಬದ ಅಳಲು. ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವಂತೆ ಹಾಗೂ ದೂರು ಹಿಂಪಡೆಯುವಂತೆ ನಿರಂತರ ಒತ್ತಡ ಹೇರಲಾಗುತ್ತಿತ್ತು ಎಂದು ಕುಟುಂಬ ದೂರಿದೆ.
ಸೋಮವಾರ ರಾತ್ರಿ ಇಬ್ಬರು ವ್ಯಕ್ತಿಗಳು ಮಹಿಳೆಯ ಮನೆಗೆ ನುಗ್ಗಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯನ್ನು ಕಟ್ಟಡದ ಮೇಲ್ಛಾವಣಿಗೆ ಕರೆದೊಯ್ದು ಸುಮಾರು 12ರಿಂದ 15 ಅಡಿ ಎತ್ತರದಿಂದ ಕೆಳಕ್ಕೆ ತಳ್ಳಿದ್ದಾರೆ ಎಂದು ಕುಟುಂಬ ತಿಳಿಸಿದೆ. ಕೆಳಕ್ಕೆ ಬಿದ್ದ ಪರಿಣಾಮ ಮಹಿಳೆಯ ತಲೆಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಹಿಳೆಯ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಭೋಂಗಲ್ ಕುಮಾರ್ ಅಲಿಯಾಸ್ ಭೋಂಗಲ್ ಮಹತೋ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಘಟನೆ ಬಿಹಾರದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕುರಿತು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗಾಗಲೇ ಗಂಭೀರ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದ ಮಹಿಳೆಗೆ ಮತ್ತೆ ಮತ್ತೆ ಬೆದರಿಕೆಗಳು ಎದುರಾಗುತ್ತಿರುವುದು ಹೇಗೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಇತ್ತ ಸಂತ್ರಸ್ತೆಯ ಕುಟುಂಬವು ಈ ಹಿಂದೆಯೇ ನೀಡಿದ್ದ ಬೆದರಿಕೆ ಮತ್ತು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ ದೂರುಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ. ಮಹಿಳೆಯ ಮೇಲಿನ ಮೊದಲ ದೌರ್ಜನ್ಯದಿಂದ ಹಿಡಿದು ಇತ್ತೀಚಿನ ದಾಳಿಯವರೆಗಿನ ಘಟನೆಗಳಲ್ಲಿ ಪೊಲೀಸರ ಪ್ರತಿಕ್ರಿಯೆ ಹೇಗಿತ್ತು ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕೆಂದು ಕುಟುಂಬ ಒತ್ತಾಯಿಸಿದೆ.
ಒಂದು ಗಂಭೀರ ಅಪರಾಧದ ವಿರುದ್ಧ ಧೈರ್ಯವಾಗಿ ದೂರು ನೀಡಿದ ಮಹಿಳೆಯೇ ಮತ್ತೆ ಮತ್ತೆ ದಾಳಿಗೆ ಒಳಗಾಗಿರುವ ಆರೋಪ ಸಾರ್ವಜನಿಕರ ಗಮನ ಸೆಳೆದಿದೆ. ಸಂತ್ರಸ್ತೆಗೆ ಸೂಕ್ತ ರಕ್ಷಣೆ, ನ್ಯಾಯ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.