ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ
ಮುಂಬೈ: ಬಿಹಾರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿನ ಬಿಜೆಪಿ ನೇತೃತ್ವದ ಎನ್ಡಿಎ ಗೆಲುವನ್ನು ಭಾರತೀಯ ಚುನಾವಣೆ ಆಯೋಗದ ಸಹಕರಿಸಿದ ಹಗರಣವಾಗಿದೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷ ಶಿವಸೇನೆ(ಯುಬಿಟಿ) ತನ್ನ ಪಕ್ಷ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ(Saamna editorial) ಆರೋಪಿಸಿದೆ.
ಸಾಮ್ನಾದ ಸಂಪಾದಕೀಯದಲ್ಲಿ ಬರೆದಿರುವ ಶಿವಸೇನೆ, ಮಹಾರಾಷ್ಟ್ರದಂತೆ ಬಿಹಾರದಲ್ಲೂ ಬಿಜೆಪಿಯ ಗೆಲುವಿನ ಸೂತ್ರವನ್ನು ನಿರ್ಧರಿಸಲಾಗಿದೆ ಎಂದು ತೋರುತ್ತಿದೆ. ಇಲ್ಲೂ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ 50 ಸ್ಥಾನಗಳನ್ನು ಗೆಲ್ಲಲು ಸಹ ಅವಕಾಶ ನೀಡಲಿಲ್ಲ. ಬಿಹಾರ ಚುನಾವಣೆಯ ಫಲಿತಾಂಶ ಅಚ್ಚರಿಯೇನಲ್ಲ. ಚುನಾವಣಾ ಆಯೋಗ ಮತ್ತು ಬಿಜೆಪಿ ಅಪೇಕ್ಷಿತ ಫಲಿತಾಂಶ ಪಡೆಯಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದಿದ್ದು, ಬಿಹಾರ ಚುನಾವಣೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಒಂದು ಹಗರಣ ಎಂದು ಕರೆದಿದೆ.
ಬಿಹಾರದಲ್ಲಿ ಮತಗಳ್ಳತನ ಮಾಡುವ ಮೂಲಕವೇ ಎನ್ಡಿಎ ಅಧಿಕಾರವನ್ನು ಉಳಿಸಿಕೊಂಡಿದೆ. ಚುನಾವಣೆ ಅಕ್ರಮ ತಡೆಗಟ್ಟುವವರೇ ಅಕ್ರಮಕ್ಕೆ ಸಾಥ್ ನೀಡಿದ್ರೆ ಜನರು ಯಾರನ್ನು ನಂಬುತ್ತಾರೆ. ಸಿಎಂ ಹುದ್ದೆಗಾಗಿ ಜೆಡಿಯು ಮೇಲೆ ಹಿಡಿತ ಸಾಧಿಸಲು ಬಿಜೆಪಿ ಹಿಂಜರಿಯುವುದಿಲ್ಲ. ನಿತೀಶ್ ಕುಮಾರ್ ಸ್ಮರಣಶಕ್ತಿಯ ನಷ್ಟದಿಂದ ಬಳಲುತ್ತಿದ್ದಾರೆ. ಅಂತಹ ಸವಾಲುಗಳನ್ನು ಹೊಂದಿರುವ ಯಾರಾದರೂ ಬಿಹಾರವನ್ನು ಹೇಗೆ ಮುನ್ನಡೆಸಬಹುದು ಎಂದು ಪ್ರಶ್ನಿಸಿದೆ.
ರಾಹುಲ್ ಗಾಂಧಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ಬಿಹಾರದಲ್ಲಿ ನಡೆಸಿದ ಮತ ಅಧಿಕಾರ ಯಾತ್ರೆಗೆ ಅಪಾರ ಬೆಂಬಲ ದೊರೆತಿದೆ ಎಂದು ಇದೇ ವೇಳೆ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ (ಏಜೆನ್ಸೀಸ್).