ಪಾಟ್ನಾ: ಬಿಹಾರದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ಮಾರ್ಚ್ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್(CM Nitish Kumar), ಏಪ್ರಿಲ್ 10ರಂದು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಆ ಬಳಿಕ ಏ. 13ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಏ. 09ರಂದು ದೆಹಲಿಗೆ ಭೇಟಿ ನೀಡಲಿರುವ ಸಿಎಂ ನಿತೀಶ್ ಕುಮಾರ್, ಮರುದಿನ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ ಬಳಿಕ ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಏ. 12ರಂದು ದೆಹಲಿಯಿಂದ ಪಾಟ್ನಾಗೆ ನಿತೀಶ್ ಹಿಂದಿರುಗಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ಬಿಜೆಪಿ ಹೊಸ ಸರ್ಕಾರ ರಚನೆಗೆ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ದೆಹಲಿಗೆ ನಿತೀಶ್ ತೆರಳುವ ಮುನ್ನವೇ ಏ. 06ರಂದು ಜೆಡಿಯು ಉನ್ನತ ಮಟ್ಟದ ನಾಯಕರ ಸಭೆ ನಡೆಸಲಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಏ. 14ರಂದು ಎನ್ಡಿಎ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯನ್ನು ನಿರ್ಧರಿಸಲಿದೆ. ಕಳೆದ 2025ರ ಚುನಾವಣೆಯಲ್ಲಿ 89 ಶಾಸಕರನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ತನ್ನ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲಿದೆ. ಡಿಸಿಎಂ ಸಾಮ್ರಾಟ್ ಚೌಧರಿ ಹೆಸರು ಸೇರಿ ಹಲವು ನಾಯಕರು ಸಿಎಂ ರೇಸ್ನಲ್ಲಿದ್ದಾರೆ (ಏಜೆನ್ಸೀಸ್).