ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು 
ದೇಶ

ಅರುಣಾಚಲ ಪ್ರದೇಶ ಮುಖ್ಯಮಂತ್ರಿಗೆ ಬಿಗ್​ ಶಾಕ್​; ಕುಟುಂಬಸ್ಥರ ಕಂಪನಿಗಳ ವಿರುದ್ಧ ತನಿಖೆಗೆ ಆದೇಶಿಸಿದ ಸುಪ್ರೀಂಕೋರ್ಟ್​ | Arunachal Pradesh CM

ನವದೆಹಲಿ: ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು(Arunachal Pradesh CM) ಅವರಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದ್ದು, ವಿವಿಧ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ಕುಟುಂಬಸ್ಥರ ಕಂಪನಿಗಳಿಗೆ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳ(ಸಿಬಿಐ)ಗೆ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಸರ್ಕಾರಿ ಗುತ್ತಿಗೆಗಳನ್ನು ಸಿಎಂ ಮತ್ತು ಅವರ ಆಪ್ತ ಕುಟುಂಬ ಸದಸ್ಯರಿಗೆ ಕಾನೂನುಬಾಹಿರವಾಗಿ ನೀಡಲಾಗಿದೆ ಎಂದು ಆರೋಪಿಸಿ ಎನ್‌ಜಿಒಗಳು, ಸೇವ್ ಮಾನ್ ರೀಜನ್ ಫೆಡರೇಶನ್ ಹಾಗೂ ವಾಲಂಟರಿ ಅರುಣಾಚಲ ಸೇನಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ನ್ಯಾ. ವಿಕ್ರಮ್ ನಾಥ್ ನೇತೃತ್ವದ ಪೀಠ ಈ ಆದೇಶವನ್ನು ನೀಡಿದೆ.
ನಾವು ಸಿಬಿಐಗೆ ಪ್ರಾಥಮಿಕ ತನಿಖೆ ನಡೆಸುವಂತೆ ಆದೇಶಿಸುತ್ತೇವೆ. ಪ್ರಾಥಮಿಕ ವಿಚಾರಣೆಯು 2015 ಜನವರಿಯಿಂದ 2025 ಡಿಸೆಂಬರ್ ವರೆಗಿನ ರ್ವಜನಿಕ ಕಾಮಗಾರಿಗಳು, ಒಪ್ಪಂದಗಳು ಮತ್ತು ಕೆಲಸದ ಆದೇಶಗಳನ್ನು ಒಳಗೊಂಡಿರುತ್ತದೆ. ಸಿಬಿಐ ಜೊತೆ ಸಂಪೂರ್ಣವಾಗಿ ಸಹಕರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಕೇಂದ್ರ ತನಿಖಾ ಸಂಸ್ಥೆಯ ಜೊತೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ರಾಜ್ಯದ ಉನ್ನತ ಅಧಿಕಾರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
ಸ್ವತಂತ್ರ ತನಿಖೆ ಅಗತ್ಯವಿದೆಯೇ ಎಂಬುದರ ಕುರಿತು ಸಿಬಿಐ 16 ವಾರಗಳಲ್ಲಿ ಸ್ಥಿತಿ ವರದಿಯನ್ನು ಸಲ್ಲಿಸಬೇಕು. ಮತ್ತು ಯಾವುದೇ ದಾಖಲೆ ನಾಶವಾಗದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಅರ್ಜಿದಾರರಾದ ಎನ್‌ಜಿಒಗಳು, ಸೇವ್ ಮಾನ್ ರೀಜನ್ ಫೆಡರೇಶನ್ ಹಾಗೂ ವಾಲಂಟರಿ ಅರುಣಾಚಲ ಸೇನೆ ಪರವಾಗಿ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಮುಖ್ಯಮಂತ್ರಿಯೊಂದಿಗೆ ಸಂಬಂಧ ಹೊಂದಿವೆ ಪ್ರತಿಪಾದಿಸಿದ್ದು, ಜುಲೈ 2025ರ ಹಿಂದಿನ ಅಫಿಡವಿಟ್ ಅನ್ನು ಉಲ್ಲೇಖಿಸಿ, ಸಿಎಂ ಅವರ ಪತ್ನಿ ಒಡೆತನದ ಬ್ರಾಂಡ್ ಈಗಲ್ಸ್ ಎಂಬ ಸಂಸ್ಥೆಗೆ 11 ವರ್ಷಗಳಲ್ಲಿ 31 ಒಪ್ಪಂದಗಳನ್ನು ನೀಡಲಾಗಿದೆ.
ಫ್ರಾಂಟಿಯರ್ ಅಸೋಸಿಯೇಟ್ಸ್ ಎಂಬ ಇನ್ನೊಂದು ಕಂಪನಿಯೂ ಸಿಎಂ ಒಡೆತನದಲ್ಲಿದೆ. ಒಟ್ಟು 91 ಒಪ್ಪಂದಗಳಾಗಿವೆ. ಕಳೆದ 10 ವರ್ಷಗಳಲ್ಲಿ ಈ ಸಂಸ್ಥೆಗಳಿಗೆ 1,270 ಕೋಟಿ ರೂ. ಮೌಲ್ಯದ ಕೆಲಸವನ್ನು ನೀಡಲಾಗಿದೆ, ಇವು ಅವರ ಪತ್ನಿ, ಸ್ವತಃ ಅಥವಾ ಅವರ ತಾಯಿಗೆ ನೇರವಾಗಿ ಸಂಬಂಧಿಸಿವೆ ಎಂದು ಅರೋಪಿಸಿದ್ದರು.
ಮುಖ್ಯಮಂತ್ರಿಗಳು ರಾಜ್ಯದ ಅತ್ಯುನ್ನತ ಹುದ್ದೆಯನ್ನು ಹೊಂದಿರುವುದರಿಂದ, ರಾಜ್ಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ತನಿಖೆ ನಡೆಸಬೇಕೆಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರು ಮತ್ತು ಪ್ರತಿವಾದಿಗಳಿಂದ ವಿವರವಾದ ವಾದಗಳು ಮತ್ತು ಸಲ್ಲಿಕೆಗಳನ್ನು ಆಲಿಸಿದ ನಂತರ ನ್ಯಾಯಾಲಯವು ಫೆಬ್ರವರಿ 17ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಿಸಿದ್ದು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಿದೆ (ಏಜೆನ್ಸೀಸ್).