ವಿನೇಶ್ ಫೋಗಟ್‌ಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್ 
ದೇಶ

ವಿನೇಶ್ ಫೋಗಟ್‌ಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಗೆ ಭಾಗವಹಿಸಲು ಗ್ರೀನ್​ ಸಿಗ್ನಲ್​! Vinesh Phogat

ಪ್ರಮುಖ ಮುಖ್ಯಾಂಶಗಳು

  • ವಿನೇಶ್ ಫೋಗಟ್‌ಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್
  • ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಗೆ ಭಾಗವಹಿಸಲು ನ್ಯಾಯಾಲದ ಅನುಮತಿ
  • ಕುಸ್ತಿ ಒಕ್ಕೂಟವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ
ನವದೆಹಲಿ: ಮೇ 30 ಮತ್ತು 31 ರಂದು ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯೆಯಲ್ಲಿ
ಭಾಗವಹಿಸಲು ದೆಹಲಿ ಹೈಕೋರ್ಟ್ ಶನಿವಾರ (ಮೇ.23) ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಗೆ ಅನುಮತಿ ನೀಡಿದೆ.

ಏನಿದು ವಿವಾದ? ವಿನೇಶ್ ಅವರನ್ನು ಬ್ಯಾನ್ ಮಾಡಿದ್ದೇಕೆ?

ಇತ್ತೀಚೆಗೆ ಭಾರತೀಯ ಕುಸ್ತಿ ಒಕ್ಕೂಟ (WFI) ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, ವಿನೇಶ್ ಫೋಗಟ್ ಅವರು ಆಯ್ಕೆ ಪ್ರಕ್ರಿಯೆಗೆ ಅರ್ಹರಲ್ಲ ಎಂದು ಒಕ್ಕೂಟ ಘೋಷಿಸಿತ್ತು. ಅಷ್ಟೇ ಅಲ್ಲದೆ, ಮೇ 9 ರಂದು ವಿನೇಶ್‌ಗೆ ಶೋ-ಕಾಸ ನೋಟಿಸ್ ನೀಡಿದ್ದ ಒಕ್ಕೂಟ, ಜೂನ್ 26 ರವರೆಗೆ ಅವರು ಯಾವುದೇ ಸ್ಪರ್ಧೆಗಳಲ್ಲಿ
ಭಾಗವಹಿಸದಂತೆ ನಿಷೇಧ ಹೇರಿತ್ತು.
ತಾಯ್ತನದ ಕಾರಣಕ್ಕಾಗಿ ಡಿಸೆಂಬರ್ 2024 ರಿಂದ ವಿನೇಶ್ ಕ್ರೀಡೆಯಿಂದ ತಾತ್ಕಾಲಿಕ ವಿರಾಮ ಪಡೆದಿದ್ದರು. ಅಂತರರಾಷ್ಟ್ರೀಯ ಕುಸ್ತಿ ಸಂಸ್ಥೆಯು ಅವರಿಗೆ ಜನವರಿ 1, 2026 ರಿಂದಲೇ ಸ್ಪರ್ಧಿಸಲು ಅನುಮತಿ ನೀಡಿದ್ದರೂ, WFI ಮಾತ್ರ ಹಳೆ ಹಗೆತನ ಸಾಧಿಸುವಂತೆ ಅವರ ಭಾಗವಹಿಸುವಿಕೆಯನ್ನು ನಿರ್ಬಂಧಿಸಿತ್ತು.

ಒಕ್ಕೂಟದ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿಕಾರಿದ್ದೇಕೆ?

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ, ಕುಸ್ತಿ ಒಕ್ಕೂಟದ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಕ್ರೀಡೆ ಮತ್ತು ನ್ಯಾಯದ ಹಿತಾಸಕ್ತಿಗಾಗಿ ವಿನೇಶ್ ಫೋಗಟ್ ಅವರಿಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡುವುದು ಅತ್ಯಗತ್ಯ ಎಂದು ಕೋರ್ಟ್ ಹೇಳಿದೆ.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ತೂಕ ಇಳಿಸಿಕೊಳ್ಳಲು ವಿಫಲವಾದದ್ದನ್ನು WFI ತನ್ನ ನೋಟಿಸ್‌ನಲ್ಲಿ ರಾಷ್ಟ್ರೀಯ ಮುಜುಗರ ಎಂದು ಕರೆದಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಕ್ರೀಡಾ ನ್ಯಾಯಾಲಯವೇ (CAS) ಹೇಳಿದೆ. ಹೀಗಿದ್ದೂ ಒಕ್ಕೂಟ ಇದನ್ನು ರಾಷ್ಟ್ರೀಯ ಮುಜುಗರ ಎಂದು ಕರೆದಿರುವುದು ಕೇವಲ ಸೇಡು ತೀರಿಸಿಕೊಳ್ಳುವ ದುರುದ್ದೇಶಪೂರಿತ ನಡವಳಿಕೆಯಾಗಿದೆ ಎಂದು ಟೀಕಿಸಿದೆ.

ತಾಯ್ತನದ ರಜೆ ವೃತ್ತಿಗೆ ಅಡ್ಡಿಯಾಗಬಾರದು

ಕುಸ್ತಿ ಒಕ್ಕೂಟ ತಂದಿರುವ ಹೊಸ ನಿಯಮಗಳು ಕೇವಲ ಆಟಗಾರರನ್ನು ಹೊರಗಿಡುವ ಉದ್ದೇಶ ಹೊಂದಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮಾತೃತ್ವದ ಕಾರಣದಿಂದಾಗಿ, ಮಹಿಳೆಯೊಬ್ಬಳು ತನ್ನ ಉದ್ಯೋಗ, ವೃತ್ತಿ ಅಥವಾ ಬಡ್ತಿಯ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಎದುರಿಸಬಾರದು ಎಂದು ನ್ಯಾಯಪೀಠ ಹೇಳಿದೆ.

ವಿಡಿಯೋ ರೆಕಾರ್ಡಿಂಗ್‌ಗೆ ಆದೇಶ

ಏಷ್ಯನ್ ಗೇಮ್ಸ್‌ನ ಈ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಅನ್ಯಾಯ ಅಥವಾ ಪಾರದರ್ಶಕತೆಯ ಕೊರತೆ ಇರಬಾರದು ಎಂದು ಕೋರ್ಟ್ ಖಡಕ್ ಸೂಚನೆ ನೀಡಿದೆ. ಇಡೀ ಆಯ್ಕೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವಿಡಿಯೋ ರೆಕಾರ್ಡ್ ಮಾಡಬೇಕು ಎಂದು ಪೀಠ ಆದೇಶಿಸಿದೆ. ಅಷ್ಟೇ ಅಲ್ಲದೆ, ಕೇಂದ್ರ ಕ್ರೀಡಾ ಸಚಿವಾಲಯವು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನಿಂದ (IOA) ಇಬ್ಬರು ಸ್ವತಂತ್ರ ವೀಕ್ಷಕರನ್ನು ನೇಮಿಸಬೇಕು. ಅವರು ಇಡೀ ಟ್ರಯಲ್ಸ್ ವೀಕ್ಷಿಸಿ ನೇರವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ,(ಏಜನ್ಸೀಸ್​).