ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ಗ್ರೀನ್ ಸಿಗ್ನಲ್
- ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ಗ್ರೀನ್ ಸಿಗ್ನಲ್
- ಶುಕ್ರವಾರ (ಫೆ.27) ರಾತ್ರಿಯೇ ಸಿನಿಮಾ ಬಿಡುಗಡೆ ಸಾಧ್ಯತೆ
- ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸಿನಿಮಾ
ಕೇರಳ: ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದಿ ಕೇರಳ ಸ್ಟೋರಿ 2 (The Kerala Story 2) ಸಿನಿಮಾಗೆ ಕೇರಳ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯನ್ನು ಈಗ ಹಿಂತೆಗೆದುಕೊಂಡಿದ್ದು, ಸಿನಿಮಾವು ಈಗ ಬಿಡುಗಡೆಯಾಗಲು ಇದ್ದ ಆತಂಕ ದೂರವಾದಂತಾಗಿದೆ.
ಕೇರಳ ಮತ್ತು ಕೇರಳದ ಜನರನ್ನು ನಕಾರಾತ್ಮಕವಾಗಿ ತೋರಿಸಲಾಗಿದೆ ಹಾಗೂ ಕೋಮು ಸೌಹಾರ್ಧತೆಯನ್ನು ಹಾಳು ಮಾಡಲು ಈ ಸಿನಿಮಾ ಕಾರಣವಾಗಬಹುದು ಎಂಬ ಹಿನ್ನಲೆಯಲ್ಲಿ ಬಿಡುಗಡೆಗೆ ತಡೆ ನೀಡಲಾಗಿತ್ತು.
ಈಗ ಸಿನಿಮಾ ಬಿಡುಗಡೆಗೆ ನ್ಯಾಯಾಲಯದಿಂದ ಇಂದ ಆತಂಕ ದೂರವಾಗಿದ್ದು, ಸಿನಿಮಾ ತಂಡ ಇಂದು ಸಂಜೆ ಪತ್ರಿಕಾಗೋಷ್ಠಿಯನ್ನು ನಡೆಸಿ ರಾತ್ರಿ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ( ಫೆ.26) ಕೇರಳ ಹೈಕೋರ್ಟ್ನ ಏಕ ಸದಸ್ಯ ಪೀಠವು ಸಿನಿಮಾ ಬಿಡುಗಡೆಗೆ ಎರಡು ವಾರಗಳ ತಡೆಯನ್ನು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ಸಿನಿಮಾದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರಿಗೆ ಗೆಲುವನ್ನು ತಂದುಕೊಟ್ಟಿದೆ.
ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಮತ್ತು ಸನ್‌ಶೈನ್ ಪಿಕ್ಚರ್ಸ್ ಅಡಿಯಲ್ಲಿ ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ 'ದಿ ಕೇರಳ ಸ್ಟೋರಿ 2' ಚಿತ್ರದ ಟೀಸರ್ ಬಿಡುಗಡೆಯಾದ ನಂತರ ವಿವಾಧ ಭುಗಿಲೆದ್ದಿತು. ಸಿನಿಮಾದ ಕಥೆಯು ಸತ್ಯ ಘಟನೆಗಳಿಂದ ಪ್ರೇರಿತವಾಗಿದೆ ಎಂದು ನಿರ್ಮಾಪಕರು ನಿರಂತರವಾಗಿ ಸಮರ್ಥಿಸಿಕೊಂಡಿದ್ದರು.
ದಿ ಕೇರಳ ಸ್ಟೋರಿ 2 ಸಿನಿಮಾದ ಯು/ಎ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಶ್ರೀದೇವ್ ನಂಬೂದಿರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆ ನಡೆಸಿತು. ಈ ಸಿನಿಮಾವು ಕೇರಳ ಮತ್ತು ಅಲ್ಲಿಯ ಜನರನ್ನು ಕೆಟ್ಟದಾಗಿ ಚಿತ್ರಿಸಿದೆ ಮತ್ತು ಮತಾಂತರದ ಕುರಿತು ತಪ್ಪು ಮಾಹಿತಿಯನ್ನು ಹರಡಲು ಹೊರಟಿದೆ ಎನ್ನುವುದು ಅವರ ವಾದವಾಗಿತ್ತು.
ಸಿಬಿಎಫ್‌ಸಿ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಸಿನಿಮಾಗೆ ಬಿಡುಗಡೆಗೆ ಪ್ರಮಾಣಪತ್ರವನ್ನು ನೀಡಿದಕ್ಕೆ ನ್ಯಾಯಪೀಠ ಟೀಕಿಸಿತು. ಟೀಸರ್ ಮತ್ತು ಟ್ರೇಲರ್ ಕೋಮು ಸಾಮರಸ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಗಮನಿಸಿ, ಎಲ್ಲಾ ವಾದಗಳು ಪೂರ್ಣಗೊಳ್ಳುವವರೆಗೆ ಬಿಡುಗಡೆಯನ್ನು ತಡೆಹಿಡಿದಿತ್ತು. ಈ ಮಧ್ಯಂತರ ತಡೆಯನ್ನು ಪ್ರಶ್ನಿಸಿ ತಾವು ವಿಭಾಗೀಯ ಪೀಠ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಲು ಸಿದ್ಧರಿದ್ದೇವೆ ಎಂದು ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ತಿಳಿಸಿದ್ದರು,(ಏಜನ್ಸೀಸ್).