ಭಾರತಕ್ಕೆ ಬಿಗ್ ರಿಲೀಫ್: ಶೇ.25ರಷ್ಟು ಸುಂಕ ಕಡಿತದ ಸುಳಿವು ನೀಡಿದ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್
ನ್ಯೂಯಾರ್ಕ್: ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಸಂಘರ್ಷದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿರುವ ಭಾರೀ ಸುಂಕವನ್ನು ಕಡಿತಗೊಳಿಸುವ ಕುರಿತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (Scott Bessent) ಸಕಾರಾತ್ಮಕ ಸುಳಿವು ನೀಡಿದ್ದಾರೆ.
ಈ ಬಗ್ಗೆ ಪೊಲಿಟಿಕೊ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್, ಭಾರತವು ರಷ್ಯಾದಿಂದ ಖರೀದಿಸುತ್ತಿದ್ದ ತೈಲ ಪ್ರಮಾಣವು ಗಣನೀಯವಾಗಿ ಕುಸಿದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಬೆಂಸೆಟ್, ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿದ್ದ ಕಾರಣ ನಾವು ಶೇ. 25 ರಷ್ಟು ಹೆಚ್ಚುವರಿ ಸುಂಕ ಹೇರಿದ್ದೆವು. ಈಗ ಭಾರತೀಯ ರಿಫೈನರಿಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ಬಹುತೇಕ ನಿಲ್ಲಿಸಿವೆ. ಇದು ನಮ್ಮ ಸುಂಕ ನೀತಿಗೆ ಸಂದ ಜಯವಾಗಿದೆ ಎಂದು ಬೆಸೆಂಟ್ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ, ಸದ್ಯಕ್ಕೆ ಸುಂಕಗಳು ಜಾರಿಯಲ್ಲಿದ್ದರೂ, ಅವುಗಳನ್ನು ತೆಗೆದುಹಾಕಲು ಈಗ ಸ್ಪಷ್ಟ ಹಾದಿ ಇದೆ ಎಂದು ಬೆಸೆಂಟ್ ಅಭಿಪ್ರಾಯಪಟ್ಟಿದ್ದಾರೆ.
ಯುರೋಪ್ ರಾಷ್ಟ್ರಗಳಿಗೆ ಕಟು ಟೀಕೆ
ಯುರೋಪ್ ದೇಶಗಳು ರಷ್ಯಾ-ಯುಕ್ರೇನ್ ಯುದ್ಧದ ವಿಷಯದಲ್ಲಿ ತೋರುತ್ತಿರುವ ದ್ವಂದ್ವ ನೀತಿಯನ್ನು ಅವರು ತರಾಟೆಗೆ ತೆಗೆದುಕೊಂಡ ಬೆಸೆಂಟ್, ಯುರೋಪಿಯನ್ನರು ಭಾರತದ ಮೇಲೆ ಸುಂಕ ಹೇರಲು ನಿರಾಕರಿಸುತ್ತಿರುವುದು ಮೂರ್ಖತನವಾಗಿದೆ. ಅವರು ಭಾರತದಿಂದ ಸಂಸ್ಕರಿಸಿದ ತೈಲವನ್ನು ಖರೀದಿಸುತ್ತಿದ್ದಾರೆ. ಅದು ಅಸಲಿಗೆ ರಷ್ಯಾದಿಂದ ಬಂದಿದ್ದು. ಇದರರ್ಥ ಅವರು ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣ ನೀಡುತ್ತಿದ್ದಾರೆ. ಇದು ವಿಪರ್ಯಾಸ ಎಂದು ಕಿಡಿಕಾರಿದ್ದಾರೆ.
ಸುಂಕಗಳು ಒಂದು ಅಸ್ತ್ರ
ಸುಂಕಗಳನ್ನು (Tariffs) ಕೇವಲ ತೆರಿಗೆಯಾಗಿ ನೋಡದೆ, ಅದನ್ನು ಬೇರೆ ದೇಶಗಳೊಂದಿಗೆ ಮಾತುಕತೆ ನಡೆಸಲು ಒಂದು ಅಸ್ತ್ರವಾಗಿ ಬಳಸುವುದಾಗಿ ಬೆಸೆಂಟ್ ಹೇಳಿದ್ದಾರೆ. ನಾವು ಸುಂಕಗಳನ್ನು ಪ್ರೀತಿಸುತ್ತೇವೆ. ಏಕೆಂದರೆ ಅವು ಇತರ ದೇಶಗಳನ್ನು ಮಾತುಕತೆಯ ಮೇಜಿನ ಬಳಿ ತರುತ್ತವೆ. ಅಮೆರಿಕದ ಮಾರುಕಟ್ಟೆಯನ್ನು ಬಳಸಿಕೊಳ್ಳುವವರು ನಮ್ಮ ನಿಯಮಗಳನ್ನು ಪಾಲಿಸಬೇಕು ಜಗತ್ತಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡಾಲರ್‌ನ ಬಲವರ್ಧನೆ ಮತ್ತು ಕ್ರಿಪ್ಟೋ ನೀತಿ
ಅಮೆರಿಕದ ಡಾಲರ್ ಜಗತ್ತಿನ ಪ್ರಬಲ ಕರೆನ್ಸಿಯಾಗಿ ಮುಂದುವರಿಯಬೇಕು ಎಂಬುದು ಬೆಸೆಂಟ್ ಆಶಯವಾಗಿದೆ. ಇದರೊಂದಿಗೆ ಡಿಜಿಟಲ್ ಆಸ್ತಿಗಳು ಮತ್ತು ಕ್ರಿಪ್ಟೋಕರೆನ್ಸಿಗಳ ಬಗ್ಗೆ ಹೂಡಿಕೆದಾರ ಸ್ನೇಹಿ ನಿಯಮಗಳನ್ನು ಜಾರಿಗೆ ತರುವ ಭರವಸೆಯನ್ನು ಬೆಸೆಂಟ್ ನೀಡಿದ್ದಾರೆ.
ಭಾರತದ ಆರ್ಥಿಕತೆಗೆ ಆಗುವ ಲಾಭಗಳೇನು..?
ಒಂದೊಮ್ಮೆ ಅಮೆರಿಕವು ಈ ಶೇ. 25 ಹೆಚ್ಚುವರಿ ಸುಂಕವನ್ನು ಹಿಂಪಡೆದರೆ, ಭಾರತದ ಹಲವು ಕ್ಷೇತ್ರಗಳಿಗೆ ಬಂಪರ್ ಲಾಭವಾಗಲಿದೆ.
ರಫ್ತುದಾರರಿಗೆ ವರದಾನ: ಜವಳಿ, ರತ್ನ ಮತ್ತು ಆಭರಣ, ಹಾಗೂ ಐಟಿ ಸೇವೆಗಳ ರಫ್ತುದಾರರಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶ ಸಿಗಲಿದೆ.
ವ್ಯಾಪಾರ ಸಂಬಂಧ ವೃದ್ಧಿ: ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ.
ಆರ್ಥಿಕ ಬೆಳವಣಿಗೆ: ಸುಂಕ ಕಡಿತದಿಂದ ಭಾರತದ ವಿದೇಶಿ ವಿನಿಮಯ ಗಳಿಕೆ ಹೆಚ್ಚಾಗಲಿದೆ,(ಏಜೆನ್ಸೀಸ್).