ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ  WEB
ದೇಶ

ಬೆಂಗಳೂರಿನಲ್ಲಿ ಹಾಡಹಗಲೇ ರಕ್ತದೋಕುಳಿ! ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ bengaluru crime

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರಕ್ತದೋಕುಳಿ ಹರಿದಿದೆ, ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಯಲಹಂಕ ನ್ಯೂಟೌನ್‌ನಲ್ಲಿ ಶುಕ್ರವಾರ ನಡೆದಿದೆ. ಕಣ್ಣೆದುರೇ ನಡೆದ ಈ ರಕ್ತಸಿಕ್ತ ದಾಳಿಯನ್ನು ಕಂಡು ಪತ್ನಿ ದಿಗ್ಭ್ರಮೆಗೊಂಡಿದ್ದು, ಕೃತ್ಯ ಎಸಗಿದ ಇಬ್ಬರು ಹಂತಕರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರಕ್ತದೋಕುಳಿ ಹರಿದಿದೆ, ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಯಲಹಂಕ ನ್ಯೂಟೌನ್‌ನಲ್ಲಿ ಶುಕ್ರವಾರ ನಡೆದಿದೆ. ಕಣ್ಣೆದುರೇ ನಡೆದ ಈ ರಕ್ತಸಿಕ್ತ ದಾಳಿಯನ್ನು ಕಂಡು ಪತ್ನಿ ದಿಗ್ಭ್ರಮೆಗೊಂಡಿದ್ದು, ಕೃತ್ಯ ಎಸಗಿದ ಇಬ್ಬರು ಹಂತಕರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನವರಾದ 39 ವರ್ಷದ ಚರಣ್ ಗೌಡ ಹತ್ಯೆಯಾದ ದುರ್ದೈವಿ. ಯಲಹಂಕದ ಕೋಗಿಲು ಸಮೀಪ ಕುಟುಂಬದೊಂದಿಗೆ ವಾಸವಾಗಿದ್ದ ಇವರು, ಕಳೆದ 10 ವರ್ಷಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 'ಧನಿ ಪ್ರಾಪರ್ಟೀಸ್' (Dhani Properties) ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು.

ಕಚೇರಿ ಮುಂದೆಯೇ ಹೊಂಚು ಹಾಕಿ ಅಟ್ಟಹಾಸ ಮೆರೆದ ಹಂತಕರು!

ಶುಕ್ರವಾರ ಬೆಳಗ್ಗೆ ಎಂದಿನಂತೆ ಚರಣ್ ಗೌಡ ಅವರು ಪತ್ನಿಯೊಂದಿಗೆ ಕಾರಿನಲ್ಲಿ ಯಲಹಂಕ ನ್ಯೂಟೌನ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ್ದರು. ಬೆಳಗ್ಗೆ ಸುಮಾರು 10.30ರ ವೇಳೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಮೀಪದ ಕಚೇರಿ ಬಳಿ ಕಾರು ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಪತ್ನಿ ಕಾರಿನಿಂದ ಇಳಿದು ಕಚೇರಿಯತ್ತ ಹೆಜ್ಜೆ ಹಾಕಿದ್ದರು. ಚರಣ್ ಗೌಡ ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ನಿಲ್ಲಿಸುವುದರಲ್ಲಿ ನಿರತರಾಗಿದ್ದರು.

ಇದನ್ನೂ ಓದಿ : ಅಮೆರಿಕದಲ್ಲಿ ಏಕಾಏಕಿ ವಿಮಾನ ಸಂಚಾರ ಸ್ತಬ್ಧ! ಸಂವಹನ ವ್ಯವಸ್ಥೆ ಕೈಕೊಟ್ಟ ಬೆನ್ನಲ್ಲೇ ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದುUS Airports

ಇದೇ ಕ್ಷಣಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ ಇಬ್ಬರು ಹಂತಕರು ಬೈಕ್‌ನಲ್ಲಿ ಅಲ್ಲಿಗೆ ನುಗ್ಗಿದ್ದಾರೆ. ಹಿಂಬದಿ ಸವಾರ ಬೈಕ್‌ನಿಂದ ಇಳಿದವನೇ ಹರಿತವಾದ ಮಾರಕಾಸ್ತ್ರದಿಂದ ಚರಣ್ ಗೌಡ ಅವರ ಮೇಲೆ ಏಕಾಏಕಿ ಎರಗಿದ್ದಾನೆ. ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮನಸೋಇಚ್ಛೆ ಕೊಚ್ಚಿದ ಪರಿಣಾಮ ಚರಣ್ ಗೌಡ ರಕ್ತದ ಮಡುವಿನಲ್ಲಿ ಕುಸಿದುಬಿದ್ದಿದ್ದಾರೆ. ಪತ್ನಿ ಕಿರುಚಾಡಿ ಸಹಾಯಕ್ಕಾಗಿ ಅಂಗಲಾಚಿದರೂ ಅಷ್ಟರಲ್ಲಾಗಲೇ ಹಂತಕರು ಬೈಕ್‌ನಲ್ಲಿ ಪರಾರಿಯಾಗಿದ್ದರು. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಭೂ ವಿವಾದವೇ ಮುಳುವಾಯಿತೇ?

ಪ್ರಾಥಮಿಕ ತನಿಖೆಯ ಪ್ರಕಾರ, ಚರಣ್ ಗೌಡ ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರೊಂದಿಗೆ ಭೂಮಿ ಮತ್ತು ನಿವೇಶನಗಳ ವಹಿವಾಟಿನ ವಿಚಾರವಾಗಿ ವೈಮನಸ್ಯವಿತ್ತು ಎನ್ನಲಾಗಿದೆ. ಇದೇ ಭೂ ವಿವಾದ ಹತ್ಯೆಗೆ ಕಾರಣವಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಹಳೇ ದ್ವೇಷ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಕಟ್ಟಡಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಕಲೆಹಾಕಲಾಗುತ್ತಿದ್ದು, ಹಂತಕರು ಬಂದ ಬೈಕ್ ಮತ್ತು ಪರಾರಿಯಾದ ಮಾರ್ಗದ ಜಾಡು ಹಿಡಿದು ಆರೋಪಿಗಳ ಹೆಡೆಮುರಿ ಕಟ್ಟಲು ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.