ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಒಟ್ಟು 58.8 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಎಣಿಕೆ ನಮೂನೆಗಳ ಮಾಹಿತಿಯ ಪ್ರಕಾರ, ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ಶುದ್ಧೀಕರಣದ ಭಾಗವಾಗಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಗುರುವಾರ ತಡರಾತ್ರಿ (ಡಿಸೆಂಬರ್ 11) ನಡೆದ ಮತ ಎಣಿಕೆಯ ಬಳಿಕ, 58,08,002 ಮತದಾರರ ಹೆಸರನ್ನು ತೆಗೆದುಹಾಕಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
24 ಲಕ್ಷ ಮೃತರು..
- ಚುನಾವಣಾ ಆಯೋಗದ ಮೂಲಗಳ ಪ್ರಕಾರ, ರಾಜ್ಯದಲ್ಲಿ ಮೃತ ಮತದಾರರ ಸಂಖ್ಯೆ ಈಗ 24,18,699. ಇದಲ್ಲದೆ, 12,01,462 ಜನರು ಪತ್ತೆಯಾಗಿಲ್ಲ. ಬೂತ್ ಮಟ್ಟದ ಅಧಿಕಾರಿಗಳು ಪತ್ತೆ ಮಾಡುವ ನಿಟ್ಟಿನಲ್ಲಿ ಮೂರ್ನಾಲ್ಕು ಬಾರಿ ಅವರ ಮನೆಗೆ ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅಂತಹ ಮತದಾರರನ್ನು ಕಾಣೆಯಾದವರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
- ರಾಜ್ಯದ 19,93,087 ಮತದಾರರು ತಮ್ಮ ವಿಳಾಸವನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಹೆಸರುಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕಾಣಿಸಿಕೊಂಡಿವೆ, ಆದ್ದರಿಂದ ಅವರ ಹೆಸರುಗಳನ್ನು ಒಂದು ಕಡೆಯಿಂದ ತೆಗೆದುಹಾಕಿ ಸರಿಯಾದ ಸ್ಥಳದಲ್ಲಿ ಉಳಿಸಿಕೊಳ್ಳಲಾಗುತ್ತದೆ.
- ಚುನಾವಣಾ ಆಯೋಗವು 1,37,575 ಮತದಾರರನ್ನು ನಕಲಿ ಎಂದು ಗುರುತಿಸಿದೆ, ಆದ್ದರಿಂದ ಅವರ ಹೆಸರುಗಳು ಕೂಡ ಕರಡು ಪಟ್ಟಿಯಲ್ಲಿ ಇರುವುದಿಲ್ಲ. 57,509 ಜನರನ್ನು ಇನ್ನೊಂದು ವರ್ಗದಲ್ಲಿ ಇರಿಸಲಾಗಿದ್ದು, ಅವರನ್ನೂ ಸಹ ಹೊರಗಿಡಲಾಗುತ್ತದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್
ಪಶ್ಚಿಮ ಬಂಗಾಳದಲ್ಲಿ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 16 ರಂದು ಪ್ರಕಟಿಸಲಿದ್ದು, ಆ ಪಟ್ಟಿಯ ಕುರಿತಾಗಿ ಯಾವುದೇ ರೀತಿಯ ದೂರುಗಳು ಅಥವಾ ದೋಷಗಳಿದ್ದರೆ ಅವುಗಳನ್ನು ಆಯೋಗಕ್ಕೆ ವರದಿ ಮಾಡಬಹುದು. ಈ ವರದಿಗಳ ಆಧಾರದ ಮೇಲೆ ವಿಚಾರಣೆಗಳನ್ನು ನಡೆಸಲಾಗುತ್ತದೆ. ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದ ಬಳಿಕವೇ, ಆಯೋಗ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನವೆಂಬರ್ 4 ರಂದು ಎಣಿಕೆ ನಮೂನೆಗಳ ವಿತರಣೆಯೊಂದಿಗೆ ಪ್ರಾರಂಭವಾಯಿತು, ಇದು ಡಿಸೆಂಬರ್ 11 ರಂದು ಕೊನೆಗೊಂಡಿದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 14, 2026 ರಂದು ಬಿಡುಗಡೆ ಮಾಡಲಾಗುತ್ತದೆ.
ಬಂಗಾಳ SIR ಬಗ್ಗೆ ಮಮತಾ ಬ್ಯಾನರ್ಜಿ vs ಚುನಾವಣಾ ಆಯೋಗ
ಮತದಾರರ ಪಟ್ಟಿ ಪರಿಷ್ಕರಣೆಯ ವಿವಾದದ ಕುರಿತಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಂತರವಾಗಿ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರುಗಳು, ಬ್ಯಾನರ್ಜಿ ಎಸ್ಐಆರ್ ವಿರುದ್ಧವಾಗಿ ನೀಡಿದ ಹೇಳಿಕೆಗಳಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ(ಏಜೆನ್ಸೀಸ್).